Tuesday, December 3, 2019

ಕರ್ಣನಿಗೇಕೆ ಅಪಾತ್ರ ಸಹಾನುಭೂತಿ ??!!

ಕರ್ಣನಿಗೇಕೆ ಅಪಾತ್ರ ಸಹಾನುಭೂತಿ ??!!

ಮಹಾಭಾರತದ ಮಹಾಪಾತ್ರಗಳೆಂದರೆ ನನಗೆ ಮುಖ್ಯವಾಗಿ ನೆನಪಿಗೆ ಬರುವುದು ಎರಡೇ. ಒಂದು ಕೃಷ್ಣ, ಇನ್ನೊಂದು ಕರ್ಣ. ಎರಡೂ ಬಹಳ ವರ್ಣಮಯ ಪಾತ್ರಗಳು. ಕೃಷ್ಣನಿಗೆ ದೈವೀಕತೆಯ/ಪೂಜ್ಯ ಭಾವದ ಲೇಪವಿದ್ದರೆ, ಕರ್ಣನಿಗೆ ಎಲ್ಲರೂ ಅಯ್ಯೋ ಎನ್ನುವವರೇ.
ಆದಿಕವಿ ಪಂಪನೇ 'ಕರ್ಣ ರಸಾಯನಮಲ್ತೆ ಭಾರತಂ' ಎಂದು ಉದ್ಗರಿಸಿದ್ದಾನೆ. ಅವನ ಕಥಾನಾಯಕ ಅರ್ಜುನನಾದರೂ ಕರ್ಣನನ್ನು ಚಿತ್ರಿಸುವಾಗ ಯಾವುದರಲ್ಲೂ ಕಡಿಮೆಯಾಗದಂತೆ ನೋಡಿಕೊಂಡಿದ್ದಾನೆ. ಮೂಲ ಮಹಾಭಾರತದಲ್ಲಿರುವ ಪ್ರಸಂಗಗಳನ್ನು ಅನೇಕ ಕನ್ನಡದ ಕವಿಗಳು ತಮ್ಮದೇ ಆದ ಶೈಲಿಗಳಲ್ಲಿ ಕಾವ್ಯ/ಕಾದಂಬರಿಗಳನ್ನು ರಚಿಸಿದ್ದಾರೆ. ಪಂಪನ 'ವಿಕ್ರಮಾರ್ಜುನ ವಿಜಯ' / (ಪಂಪ ಭಾರತ), ರನ್ನನ 'ಸಾಹಸ ಭೀಮ ವಿಜಯ' /ಗದಾಯುದ್ಧ , ಕುಮಾರವ್ಯಾಸನ 'ಕರ್ಣಾಟ ಭಾರತ ಕಥಾ ಮಂಜರಿ', ಲಕ್ಷ್ಮೀಶನ 'ಜೈಮಿನಿ ಭಾರತ', ಇತ್ತೀಚಿನ ಎಸ.ಎಲ್. ಭೈರಪ್ಪರ 'ಪರ್ವ' ಹೀಗೆ ಇನ್ನೂ ಹಲವಾರು ಇವೆ.

ಅನೇಕ ಚಲನಚಿತ್ರಗಳೂ, ಧಾರಾವಾಹಿಗಳೂ ಬಂದಿವೆ. ಮುಖ್ಯವಾದವು ಎಂದರೆ ತಮಿಳಿನ ಶಿವಾಜಿ ಗಣೇಶನ್ ನಟಿಸಿದ 'ಕರ್ಣನ್', ತೆಲುಗಿನಲ್ಲಿ ಬಂದ ಎನ್.ಟಿ.ಆರ್. ನಟಿಸಿ ನಿರ್ದೇಶಿಸಿದ 'ದಾನ ವೀರ ಶೂರ ಕರ್ಣ'.

ಕನ್ನಡದಲ್ಲೂ ಇತ್ತೀಚಿಗೆ ಕುರುಕ್ಷೇತ್ರ ಎಂಬ ಚಿತ್ರದಲ್ಲಿ ದುರ್ಯೋಧನನ್ನು ವೈಭವೀಕರಿಸಿದ್ದರಾದರೂ ಆ ಚಿತ್ರದ ಅನೇಕ ದೃಶ್ಯಗಳು ಮತ್ತು ಸಂಭಾಷಣೆಗಳನ್ನು  ತೆಲುಗಿನ 'ದಾನ ವೀರ ಶೂರ ಕರ್ಣ'ದಂತೆಯೇ ಯಥಾವತ್ತಾಗಿ ಬಳಸಿದ್ದಾರೆ.
ಧಾರಾವಾಹಿಗಳಲ್ಲಿ ಬಿ.ಆರ್. ಚೋಪ್ರಾ ಅವರ ಮಹಾಭಾರತ ಬಿಟ್ಟರೆ ಯಾವುದೂ ಹೇಳಿಕೊಳ್ಳುವಷ್ಟು ಚೆನ್ನಾಗಿ ಮೂಡಿಬರಲಿಲ್ಲ.

ನಾನು ಗಮನಿಸಿದಂತೆ, ಎಲ್ಲರಿಗೂ ಅದೇಕೋ ಕರ್ಣನ ಮೇಲೆಯೇ ಹೆಚ್ಚಿನ ಸಹಾನುಭೂತಿ. ದುಷ್ಟ ಚತುಷ್ಟಯರಲ್ಲಿ ಒಬ್ಬನಾದರೂ ಅವನ ಸ್ಥಿತಿ ಕಂಡು ಮರುಗದವರಿಲ್ಲ. 'ಅಯ್ಯೋ!' ಎಂದು ಉದ್ಗರಿಸದವರಿಲ್ಲ. ನನ್ನ ಅನಿಸಿಕೆಯ ಪ್ರಕಾರ ಕೃಷ್ಣನಿಗೆ ಕರ್ಣನಿಗಿಂತಲೂ ದಯನೀಯವಾದ ಪರಿಸ್ಥಿತಿಗಳಿತ್ತಲ್ಲವೇ ?? ಅವನು ಹುಟ್ಟಿದ್ದೇ ಜೈಲಿನಲ್ಲಿ, ಬೆಳೆದಿದ್ದು ಗೋಪಾಲರ ಜೊತೆ ಗೋಕುಲದಲ್ಲಿ. ಹುಟ್ಟಿನಿಂದಲೂ ಸಾವನ್ನು ಬೆನ್ನಿಗಿಟ್ಟುಕೊಂಡಂತೆ ಅವನನ್ನು ಕೊಲ್ಲಲು ಬರುತ್ತಿದವರೇ ಎಲ್ಲ. ಎಲ್ಲ ಕ್ಷತ್ರಿಯರಂತೆ ಅವನಿಗೆ ಸಕಾಲಕ್ಕೆ ಶಸ್ತ್ರ , ಶಾಸ್ತ್ರಗಳ ಅಭ್ಯಾಸವೂ ಆಗಲಿಲ್ಲ. ಅವನು ಸಾಂದೀಪನಿ ಮುನಿಗಳ ಬಳಿ  ಔಪಚಾರಿಕವಾಗಿ ಗುರುಗಳ ಬಳಿ ಸೇರುವ ಹೊತ್ತಿಗಾಗಲೇ ೧೬ ವರ್ಷದ ತರುಣ. ಈ ವಯಸ್ಸಿನಲ್ಲಿ ಕರ್ಣ, ಅರ್ಜುನರಾಗಲೇ ಮಹಾನ್ ಬಿಲ್ವಿದ್ಯಾ ಪ್ರವೀಣರಾಗಿದ್ದರು. ಕರ್ಣನಿಗಾದರೂ ದುರ್ಯೋಧನನ ದೆಸೆಯಿಂದ ಅಂಗರಾಜ್ಯ ದೊರಕಿ ಅದರ ಅಧಿಪತಿಯಾಗಿ ಮೆರೆದ. ಪಾಪ ಕೃಷ್ಣ ಎಂದಿಗೂ ರಾಜನಾಗಲೇ ಇಲ್ಲ. ಎಂದಿಗೂ ಅಲ್ಲಿ ಉಗ್ರಸೇನನೇ ಮಹಾರಾಜನಾಗಿದ್ದ. ಬದಲಾಗಿ ಕೃಷ್ಣ ಯುಧಿಷ್ಠಿರನನ್ನು ಚಕ್ರವರ್ತಿಯಾಗಿ ರೂಪುಗೊಳ್ಳಲು ಸಹಾಯ ಮಾಡಿ, ರಾಜಸೂಯ ಯಾಗ ಮಾಡಿಸಿದ. ಜರಾಸಂಧ ಯುದ್ಧ ಸಾರಿದಾಗ ಎದುರುಗೊಳ್ಳದೇ ಊರಿಗೆ ಊರನ್ನೇ ಬದಲಾಯಿಸಿ ದ್ವಾರಕೆ ನಿರ್ಮಿಸಿದ. ನಂತರ ಜಾಣ್ಮೆಯಿಂದ ಭೀಮನ ಕೈಲಿ ಕೊಲ್ಲಿಸಿದ. ಇಷ್ಟೆಲ್ಲಾ ಆದರೂ ಅವನನ್ನು ಪಾಂಡವರು, ಕುಂತಿ, ವಿದುರ ಬಿಟ್ಟರೆ ಇನ್ಯಾರೂ ಆದರಿಸಲಿಲ್ಲ. ಸ್ತ್ರೀ ಲೋಲ ಎಂದರು, ಹೇಡಿ ಎಂದು ಆಡಿಕೊಂಡರು. ರಾಜಸೂಯ ಯಾಗದಲ್ಲಿ ಅವಮಾನ ಮಾಡಿದರು. ಸಂಧಾನಕ್ಕಾಗಿ ಹಸ್ತಿನಾವತಿಗೆ ತೆರಳಿದಾಗ ದುರ್ಯೋಧನ, ಇದೇ ಕರ್ಣ ಅವಮಾನ ಮಾಡಿ ಬಂಧಿಸಲೇ ಹೊರಟಿದ್ದರು. ಆದರೂ ಕರ್ಣನಿಗೇ ಎಲ್ಲರೂ ಪ್ರಾಮುಖ್ಯತೆ ಕೊಡುತ್ತಾರೆ, ಅಪಾತ್ರ ಸಹಾನುಭೂತಿ ತೋರಿಸುತ್ತಾರೆ. ಅವನನ್ನು ಸಂದರ್ಭದ ಶಿಶು, ಅಯ್ಯೋ ಪಾಪ ಎನ್ನುತ್ತಾರೆ. ಕರ್ಣನಿಗೆ ಶಾಪವಿತ್ತು, ಅನ್ಯಾಯವಾಯ್ತು ಅನ್ನುವಿರಾದರೆ, ಮಕ್ಕಳನ್ನು ಸರಿಯಾಗಿ ಬೆಳೆಸದ ಗಾಂಧಾರಿಯ೦ತಹ ತಾಯಿಯ  ಶಾಪವನ್ನೇ ಕೃಷ್ಣ ಸಂತೋಷವಾಗಿ ಸ್ವೀಕರಿಸಲಿಲ್ಲವೇ? ದೂರ್ವಾಸರ ಅವಸರದ ಶಾಪವನ್ನೂ ಸ್ವೀಕರಿಸಲಿಲ್ಲವೇ ? ಕೃಷ್ಣನಿಗೆ ಒದಗಿದ ಕಷ್ಟಗಳ ಭಾರ ನೋಡಿದರೆ ಕರ್ಣನಿಗಿಂತ ಒಂದು ಪಟ್ಟು ಹೆಚ್ಚಾಗಿಯೇ ಇದೆ. ಆದರೂ ಅದೆಲ್ಲವನ್ನೂ ಮೀರಿ ಅವನು ಹೇಗೆ ದೇವಮಾನವನಾಗಿ ಬೆಳೆದು ನಿಂತು ಗೀತಾಚಾರ್ಯನಾದ???  'ಅಯ್ಯೋ ಪಾಪ' ಎನಿಸಿಕೊಂಡ ಕರ್ಣ ಪಾತಾಳಕೇಕೆ ಇಳಿದ??.

ನಿಮಗೇನನ್ನಿಸುತ್ತದೆ ??
ಅನಿಸಿಕೆ ತಿಳಿಸಿ.
                                                                                         
                                                                                                                             signing off

9 comments:

  1. ಇದರ ಅರ್ಥ ಜಿಸ್ ಕಾ ಕೋಯಿ ನಹಿ ತೊ ಉಸ್ ಕಾ ತೋ ಖುದಾ ಹೆ ಯಾರೋ ಮೋದಿ ಯವರಿಗೆ ಮೊದಲು ಅಮೆರಿಕದ ಮೀಸಾ ನಿರಾಕರಿಸಿದರು ಆದರೆ ಈಗ ಟ್ರಂಪ್ ಎಲೆಕ್ಷನ್ ಕ್ಯಾಮ್ ಪಸ್ಗೆ ಮೋದಿನೆಬೇಕು. ದನಾ ಕಾದ ಮುತ್ತು ರಾಜ ರಾಜ ಕುಮಾರ್ ಆದ ಹೀಗೆ ಹೇಳುತ್ತಾ ಹೋದರೆ ಲೆಕ್ಕವಿಲ್ಲದಷ್ಟು ನಿದರ್ಶನಗಳಲ್ಲಿ ಹೇಳಬಹುದು. ಆದರೆ ಜೀವನದಲ್ಲಿ ಚಿನ್ನದಂತ ಆಸೆ ಅವಕಾಶ ಸೌಲಭ್ಯ ಇದ್ದರು ರಾಹುಲ್ ಗಾಂಧಿ ಅದೃಷ್ಟ ಖೋತಾ ಇದೇ ಜೀವನ .ರಮೇಶ್ ಕೃಷ್ಣ



    ReplyDelete
    Replies
    1. ಪ್ರತಿಕ್ರಿಯೆಗೆ ಧನ್ಯವಾದಗಳು.ಕರ್ಣನಿಗೆ ದುರಂತ ನಾಯಕ ಎಂದು ಸಹಾನುಭೂತಿ ತೋರಿಸುವುದು ಸರಿಯೇ?

      Delete
  2. ಮಕ್ಕಳ ಕುತೂಹಲ ಎಲ್ಲಿಯವರೆಗೆ ನಮಗೆ ತಲೆನೋವಾಗುವುದಿಲ್ಲವೋ ಅಲ್ಲಿಯವರೆಗೂ ತಮಾಷೆ, ಅದರ ನಂತರ ನಾವೆಂದುಕೊಂಡ್ರೆ ಮಾತ್ರ ಶಿಕ್ಷೆ. ನಿಮ್ಮ ಮಗ ಈಗಿನವರು ಹೇಳುವಂತೆ ಔಟ್ ಆಫ್ ಬಾಕ್ಸ್ ಯೋಚನೆ ಮಾಡುತ್ತಿದ್ದಾನೆ. ಹೀಗೆ ಮುಂದೆ ಸಾಗಿ ಕನ್ನಡಕ್ಕಾಗಿಯೇ ವಿಕಿ ಶುರು ಮಾಡಲಿ. ಅವನ ಆಸಕ್ತಿಗೆ ನೀರೆರೆಯುತ್ತಿರುವ ನಿಮ್ಮ ತಾಳ್ಮೆಗೆ ನನ್ನ ಪ್ರಣಾಮಗಳು ��

    ReplyDelete
    Replies
    1. ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು. ಇದು ನನ್ನ ಕನ್ನಡ ಇಂಗ್ಲಿಷ್ ಲೇಖನಕ್ಕಲ್ಲವೇ... ನಿಮ್ಮ ಹಾರೈಕೆ ಫಲಿಸಲಿ ಎಂದು ನಾನೂ ಆಶಿಸುತ್ತೇನೆ.

      Delete
  3. ನಿಜ. ತಪ್ಪಿ ಇಲ್ಲಿ ಬರೆದಿದ್ದೇನೆ.

    ReplyDelete
  4. ಕರ್ಣನು ಬಹಳ ಶಕ್ತಿವಂತ, ಬುದ್ಧಿವಂತ, ಕರುಣಾಮಯಿ, ಧರ್ಮ ಕರ್ಮ ತಿಳಿದಿರುವವನು. ಅವನನ್ನು ಸಾಕಿದ ಅತಿರಥ ರಾಧರು ಅವನಿಗೆ ಒಳ್ಳೆಯ ಮಾರ್ಗದಲ್ಲಿ ನಡೆಯಲು ಪ್ರೇರೇಪಿಸಿರುತ್ತಾರೆ. ಆದರೆ ಬಹಳ ಸೂಕ್ಷ್ಮವಾಗಿ ಗಮನಿಸಿದರೆ ನಾವು ಕಾಣುವುದು ಪ್ರತಿ ಸಲವೂ ಕರ್ಣನು ಜೀವನದಲ್ಲಿ ಬೇಕಾದದ್ದು ಪಡೆಯಲು ಧರ್ಮ ಪರಿಗಣಿಸದೆ ಅನುಕೂಲಸಿಂಧು ಮಾರ್ಗವನ್ನು ಅವಲಂಬಿಸುತ್ತಾನೆ.
    1. ತಂದೆ ತಾಯಿ ಕುಂತಿ ಸೂರ್ಯರಾದರು ಅವನು ತನ್ನ ಸತ್ಯ ತಿಳಿದಾಗ ಅತಿರಥ ರಾಧರಿಗೆ ಹೇಳಿ ತನ್ನ ಜಾತಿಗನುಗುಣವಾಗಿ ಜೀವಿಸಲು ಪ್ರಯತ್ನಿಸುತ್ತಾನೆ, ತಪ್ಪಲ್ಲ. ಇದರ ಬಗ್ಗೆ ಅಷ್ಟು ತಿಳಿದಿಲ್ಲ. ಮುಂದಿನ ಸಾರಿ ಓದಿ ವಿಚಾರಮಾಡಿ ತಿಳಿಸುತ್ತೇನೆ. ಸಾಕಿದ ತಂದೆ ತಾಯಿಯರಿಗೆ ಹೇಗೆ ವಂದನೆ ಸಲ್ಲಿಸುತ್ತಾನೆಂದು ಯಾರಿಗೂ ತಿಳಿದಿಲ್ಲ.
    2. ದೂರ್ವಾಸರ ಹತ್ತಿರ ಸುಳ್ಳು ಹೇಳಿ ಅಧ್ಯಯನ ಮಾಡುತ್ತಾನೆ. ಪೂರ್ಣ ವಿದ್ಯಾಭ್ಯಾಸವು ಸುಳ್ಳಿನ ಮೇಲೆ ಆಧರಿಸಿರುತ್ತದೆ. ಈಗಿನ ಆದರೆ ಅಷ್ಟೂ ವಿದ್ಯೆಯು ಹೋಮ ಮಾಡಿದಂತೆ. ಬೇಕಾದ ಕಾಲಕ್ಕೆ ಒಂದೂ ನೆನಪಿಗೆ ಬರಲಾರದ ಶಾಪವಿರುತ್ತದೆ. ಅನುಕೂಲಕ್ಕೆ ಸುಳ್ಳು ಹೇಳಿ ಅವನು ಸಾಧಿಸಿದ್ದೇನು ?
    3. ‌‌‌‌‌ಅವನನ್ನು ಸೂತನೆಂದಾಗ ಸ್ವಯಂವರದಲ್ಲಿ ಅವನು ಅವಮಾನಪಟ್ಟಿದ್ದು ಜಾತಿಗಾಗಿ. ಸಂಸ್ಕಾರಕ್ಕಾಗಲ್ಲ.
    4. ದುರ್ಯೋಧನನನ್ನು ಪ್ರತಿ ಬಾರಿಯೂ ಸ್ನೇಹದ ಹೆಸರಿನಲ್ಲಿ ಗೆಲ್ಲಿಸಿದಾಗ ಅಲ್ಲಿದ್ದದ್ದು obligation. ತಾನು ಅಂಗೀರಾಜನಾಗಿಯೂ ನಿಂತಿದ್ದು ಅಧರ್ಮದ ಪರ. ರಾಜನನ್ನಾಗಿ ಮಾಡಿದ ದುರ್ಯೋಧನನ ಕೈಗೊಂಬೆಯಾದ.
    5. ದುರ್ಯೋಧನ ಸ್ನೇಹಿತ ನಿಜ, ಸ್ನೇಹ ಮೀರಿ ಕರ್ಣ ಯಾವತ್ತೂ ದುರ್ಯೋಧನನಿಂದ ಅಧರ್ಮ ನಡೆದಾಗ ಅಡ್ಡ ಹಾಕಲಿಲ್ಲ, ಬುದ್ಧಿ ಹೇಳಲಿಲ್ಲ, ಸ್ನೇಹವನ್ನು ಧಿಕ್ಕರಿಸಲಿಲ್ಲ ತ್ರೇತಾಯುಗದ ವಿಭೀಷಣನೂ ಆಗಲಿಲ್ಲ.ಇವೆಲ್ಲವೂ ಈಗಿನ ಕಲಿಯುಗದಲ್ಲಿ ಕಾಣುವುದೇ.
    6. ಕುರುಕ್ಷೇತ್ರ ಯುದ್ಧಕ್ಕೂ ಮೊದಲು ಕೃಷ್ಣ ದೇವಮಾನವನಾಗಿ ಕಡೆ ಅವಕಾಶ ಕೊಟ್ಟ, ಸನ್ಮಾರ್ಗದಲ್ಲಿ ನಡೆಯುವುದಿದ್ರೆ ಹಾಗೆ ಆಗಲಿ ಎಂದು. ಮತ್ತೊಮ್ಮೆ ಕರ್ಣ ಅಧರ್ಮ ವನ್ನು ಆರಿಸಿದ. ಈಬಾರಿ ನೆಪ ತಾಯಿಯ ಕರ್ತವ್ಯ ಲೋಪ. ಆದರೆ ಮಗನ ಕರ್ತವ್ಯ ಮರೆತ. ಮಹಾಭಾರತ ಇಸ್ ಅಲ್ ಅಬೌಟ್ perspective. ಕುಂತಿಯನ್ನೇ ದೂಷಿಸಿತು. ಕುಂತಿಯದೂ ತಪ್ಪೇ, ಆದರೆ ಕರ್ಣ ಅವಕಾಶವಿದ್ದೂ ತಪ್ಪೆಸಗಿದ. ಕಾರಣ ಕುಂತಿಯ ಮಾತು ನಡೆಸಿದ್ದರೆ ದುರ್ಯೋಧನ ತಿರುಗಿ ಬೀಳುತ್ತಿದ್ದ, ರಕ್ತ ಸಂಬಂಧಕ್ಕಾಗಿ ಸ್ನೇಹ ಮರೆತನೆಂಬ label ಸಿಗುತ್ತಿತ್ತು. ಈಗಿನ ಜನರೇಷನ್ ಜೀವಿಸುವುದು label ಮತ್ತು ಸೆಲ್ಫ್ ಈಗೋ ಗೋಸ್ಕರ.
    7. ಪ್ರತಿ ಬಾರಿಯೂ ಲೋಕದ ನಿಯಮ ಮೀರಿ ಕರ್ಣನಿಗೆ ಧರ್ಮಮಾರ್ಗದಲ್ಲಿ ನಡೆಯಲು ಅವಕಾಶಗಳು ಲಭಿಸಿವೆ. ಅವನು ನಂಬಿದ ಸತ್ಯ ಧರ್ಮ , ಸತ್ಯವೂ ಅಲ್ಲ, ಧರ್ಮವೂ ಅಲ್ಲ. ಆದರೆ ಪ್ರತಿ ಬಾರಿಯು ಕರ್ಣ ಧರ್ಮ ಮತ್ತು ತನ್ನ ಸ್ವಾರ್ಥ ಮತ್ತು ಅನುಕೂಲವನ್ನು ತಕ್ಕಡಿ ತೂಗಿ ಅನುಕೂಲವನ್ನಾರಿಸಿದ.

    ಅವನಿಗೆ ಸಿಕ್ಕಿದ್ದ ಸಹಾನುಭೂತಿ ಕೇವಲ ಅವನು ಕೌನ್ತೇಯನಾದರೂ ಅವನ ಜನ್ಮಾನುಸಾರ ಅವನಿಗೇನು ದಕ್ಕಿಲ್ಲ ಎಂಬುದಕ್ಕೋಸ್ಸ್ಕರ. ಸಾಫ್ಟ್ ಕಾರ್ನೆರ್.
    ಆದರೆ ಕರ್ಣ ದುರ್ಯೋಧನ ದುಶ್ಯಾಸನರಷ್ಟು ಕೆಡುಕನಲ್ಲದಿದ್ದರು ಅವನು ವಿಭೀಷಣನಂತೆ ತನ್ನ ಕರ್ಮ ಧರ್ಮಗಳನ್ನು ಬದಲಿಸಲಿಲ್ಲ. ಅದಕ್ಕಾಗಿಯೇ ಒಂದಿಡೀ ಯುಗದ ಭಾಷ್ಯಗಳಲ್ಲಿ ಸಹಾನುಭೂತಿ ಪಡೆದ. ಯಾವುದೇ ಸ್ಥರದಲ್ಲೂ ಅವನು ಧರ್ಮವನ್ನಾರಿಸಿದ್ದರೆ ಅವನು ಧರ್ಮರಾಯನಿಗೆ ತಕ್ಕ ಅಗ್ರಜನಾಗುತ್ತಿದ್ದ.


    ReplyDelete
    Replies
    1. ನಿಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಕ್ಕೆ ಬಹಳ ಧನ್ಯವಾದಗಳು.ನನ್ನ ಬರಹವನ್ನು ಓದಿ ಸುದೀರ್ಘವಾಗಿ ಅವಲೋಕನ ಮಾಡಿದ್ದೀರಿ. ಈ ಬರಹದ ಆಶಯವೂ ಅದೇ ಆಗಿತ್ತು. ಧರ್ಮ - ಕರ್ಮದ ಚಿಂತನೆಗೆ ತೊಡಗಿಸುವುದು. ಈ ನಿಟ್ಟಿನಲ್ಲಿ ನನ್ನ ಪುಟ್ಟ ಪ್ರಯತ್ನ ಸಾರ್ಥಕವಾಯಿತು ಎಂದು ಭಾವಿಸುತ್ತ ... ಧನ್ಯವಾದಗಳು 🙏

      Delete
  5. ಇದುವರೆಗೂ ಯಾರೂ ಕರ್ಣನಿಗೆ ಸಹಾನುಭೂತಿಯೇಕೆ ಎಂದು ಕೇಳಿದ್ದು ಎಲ್ಲೂ ಕಂಡಿಲ್ಲ. ಬುದ್ಧಿಗೆ ಒಳ್ಳೆಯ ಸಾಣೆಯಾಯ್ತು. ನಿಮ್ಮ ವಿಚಾರಧಾರೆಗೆ ನನ್ನ ಪ್ರಣಾಮಗಳು.

    ReplyDelete
    Replies
    1. ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು. ನನ್ನ ಪುಟ್ಟ ಪ್ರಯತ್ನ ಸಾರ್ಥಕವಾಯಿತು 🙏

      Delete