ನಾನು ಸುಮಾರು 2012ನೆೇ ಇಸವಿಯಲ್ಲಿ ಪರ್ವ ಓದಿದ್ದು... ಬರೋಬ್ಬರಿ 5-6 ತಿಂಗಳುಗಳ ಕಾಲ ತೆಗೆದುಕೊಂಡಿದ್ದೆ ಸಂಪೂರ್ಣವಾಗಿ ಓದಲು... ಆಮೇಲೆ ಇಂದಿನವರೆಗೂ ಅನೇಕ ಬಾರಿ ಪುಟ ತಿರುವಿ ಮೆಲುಕು ಹಾಕಿದ್ದೇನೆ ... ಆಗಾಗ ಹಾಕುತ್ತಲೇ ಇರುತ್ತೇನೆ.. ನನ್ನ ಅಚ್ಚುಮೆಚ್ಚಿನ ಕೃತಿಗಳಲ್ಲಿ ಪರ್ವಕ್ಕೆ ಅಗ್ರಸ್ಥಾನ ... ಮಹಾಭಾರತದ ಕಥೆಯನ್ನು ಕಾದಂಬರಿ ರೂಪದಲ್ಲಿ, ಇಲ್ಲೇ ಪಕ್ಕದ ಮನೆಯಲ್ಲಿಯೇ, ನಮ್ಮಗಳ ಮನೆಯಲ್ಲಿಯೇ ನಡೆದಿತ್ತಿತ್ತೇನೋ, ಅನ್ನುವ ಮಟ್ಟಿಗೆ ಹತ್ತಿರವಾಗುವಷ್ಟು ವಾಸ್ತವಿಕತೆ ತುಂಬಿ ಬರೆದಿರುವ ಕೀರ್ತಿ ಭೈರಪ್ಪನವರದು.. ಬಹುಶಃ ಇದು ಅಭೂತಪೂರ್ವ ಹಾಗೂ ಮುಂದೆ ಇನ್ನೊಂದು ಇಂತಹ ಕಥೆ ಬರುವುದು ಕಷ್ಟಸಾಧ್ಯ... ಮಹಾಭಾರತವನ್ನು ಅನೇಕರು ಕನ್ನಡದಲ್ಲಿ ಈವರೆಗೆ ಬರೆದಿದ್ದರೂ ಭೈರಪ್ಪನವರ ಪರ್ವ ಪ್ರತ್ಯೇಕವಾಗಿ ನಿಲ್ಲುತ್ತೆ... ಪಂಪ, ಅವನ ಭಾರತದಲ್ಲಿ ಅವನ ಆಶ್ರಯದಾತ ಅರಿಕೇಸರಿಯನ್ನು ಅರ್ಜುನನಿಗೆ ಸಮೀಕರಿಸಿದ್ದಾನೆ, ವಿಕ್ರಮಾರ್ಜುನ ವಿಜಯ ಎಂದಿದ್ದಾನೆ ..... ರನ್ನನದು ಸಾಹಸ ಭೀಮ ವಿಜಯ ... ಕುಮಾರವ್ಯಾಸನದು ಕೃಷ್ಣಕಥೆ.. ಆದರೆ ಭೈರಪ್ಪನವರ ಪರ್ವದಲ್ಲಿ ಯಾರ ವೈಭವೀಕರಣವೂ ಇಲ್ಲ.. ಇದ್ದದ್ದನ್ನು ಇದ್ದ ಹಾಗೆ, ಎದೆಗೆ ಒದ್ದ ಹಾಗೆ ಮಾತಾಡುತ್ತವೆ ಎಲ್ಲ ಪಾತ್ರಗಳು.. ಓದುಗರ ಅಂತಃಕರಣಗಳನ್ನು ಕೆದಕಿ, ತರ್ಕಕ್ಕಿಳಿಸುತ್ತವೆ ಭೈರಪ್ಪನವರ ಪರ್ವದ ಪಾತ್ರಗಳು ... ಈ ಬೃಹತ್ ಕಾದಂಬರಿಯನ್ನು ನಾಟಕದ ರೂಪದಲ್ಲಿ ಪ್ರಸ್ತುತ ಪಡಿಸಬಹುದೇ? ಹಲವಾರು 'ಸ್ವಗತ (soliloquy)'ಗಳ ಸರಮಾಲೆಯೇ ಆಗಿರುವ ಈ ಕಾದಂಬರಿಯನ್ನು ನಾಟಕ ರೂಪದಲ್ಲಿ ಅದು ಹೇಗೆ ತರುತ್ತಾರೆ ... ?ಸಾಬೀತು ಪಡಿಸಿತು 'ರಂಗಾಯಣ, ಮೈಸೂರು' ! ಈಗ ಇದು ಇತಿಹಾಸ. 'ಪರ್ವ' ನಾಟಕದ ರಂಗ ಪ್ರಯೋಗಕ್ಕೆ ಶ್ರಮಿಸಿರುವ ನೂರಾರು ಕಲಾವಿದರು, ತಂತ್ರಜ್ಞರು, ರಂಗಾಯಣದ ಇಡೀ ತಂಡ, ಹಾಗೂ ನಿರ್ದೇಶಕರಾದ ಶ್ರೀ ಪ್ರಕಾಶ್ ಬೆಳವಾಡಿಯವರು ನಮನಾರ್ಹರು, ಅಭಿನಂದನಾರ್ಹರು. ಇಂತಹ ರಂಗಪ್ರಯೋಗವನ್ನು ಕಣ್ಣಾರೆ ಕಾಣಲು ನನಗೆ ಕಾಲ ಕೂಡಿ ಬಂದದ್ದು ನಿನ್ನೆ ಮೇ 18ರ ಭಾನುವಾರ...
ಸುಮಾರು 8 ಘಂಟೆಗಳಷ್ಟರ ದೀರ್ಘ ನಾಟಕವನ್ನು ಒಂದು ಕಡೆ ಕೂತು ನೋಡುವುದು ಒಂದು ಜೀವಮಾನದ ಅನುಭವ. ಕುಂತಿ ಪಾತ್ರಧಾರಿ ದಿವ್ಯ ರಘುರಾಮ್ ಅತ್ಯಂತ ಆಪ್ತವಾಗಿ ಭೈರಪ್ಪನವರ ಕುಂತಿಯನ್ನು ರಂಗದ ಮೇಲೆ ತಂದಿಟ್ಟರು.. ಹಿರಿಯ ಕುಂತಿಯಾಗಿ ವೇದಿಕೆಯ ಮೇಲೆ ನಿಂತು ಸ್ವಗತಗಳನ್ನೂ ಬಿನ್ನವಿಸಿಕೊಳ್ಳುತ್ತ, ಹಿಂದಿನ ಘಟನೆಗಳನ್ನು ನೆನೆಯುತ್ತ ಜೊತೆ ಜೊತೆಗೆ ವೇದಿಕೆಯ ಮೇಲೆ ಆ ಪ್ರಸಂಗವನ್ನು ಹಿನ್ನೆಲೆಯಲ್ಲಿಯೇ ಕಟ್ಟಿಕೊಡುವ ಕ್ರಮ ಶ್ಲಾಘನೀಯ ! ಬೆಳವಾಡಿಯವರ ಮಕ್ಕಳು ತೇಜು ಹಾಗೂ ಮೇಘನಾ ಯುವ ಕುಂತಿ ಹಾಗೂ ಮಾದ್ರಿಯಾಗಿ ಅಮೋಘವಾಗಿ ನಟಿಸಿದ್ದಾರೆ .. ಈರ್ವರು ಪುತ್ರಿಯರು ನಾಲ್ಕಾರು ಪಾತ್ರಗಳನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.. ಮೇಘನಾ ನಾಟಕದ ಸಹ ನಿರ್ದೇಶಕಿ ಸಹ ಹೌದು..
ಹಿರಿಯ ಕುಂತಿಯಾಗಿದ್ದ ದಿವ್ಯ ಗಕ್ಕನೆ ಶಿಖಂಡಿಯ ಪಾತ್ರದಲ್ಲಿ ಬಂದು ಮಂತ್ರಮುಗ್ಧರಾಗಿಸಿದ್ದು ಅಚ್ಚರಿಯ ವಿಷಯ.. ಹೀಗೆ ಅನೇಕ ಕಲಾವಿದರು ಎರಡು, ನಾಲ್ಕು ಪಾತ್ರಗಳನ್ನು ನೋಡುಗರ ಅರಿವಿಗೇ ಬಾರದಂತೆ, ಆಮೇಲೆ ಓಹೋ ಅವರೇ ಇವರು, ಇವರೇ ಅವರು ಎಂದುಕೊಳ್ಳುವಂತೆ ಮಾಡಿದ್ದಂತೂ ಸತ್ಯ... ಇದು ಕಲಾವಿದರನ್ನು 8ಗಂಟೆಗಳ ಸುದೀರ್ಘ ನಾಟಕದಲ್ಲಿ ದುಡಿಸಿಕೊಂಡಿರುವ ನಿರ್ದೇಶಕರ ಜಾಣ್ಮೆಯೇ ಸರಿ! ಕೃಷ್ಣನ ಪಾತ್ರಕ್ಕೆ ಚಂದ್ರಶೇಖರ ನಾಡಿಗೇರ ಅವರ ಆಯ್ಕೆ ಅತ್ಯಂತ ಸೂಕ್ತ ಎನಿಸುತ್ತದೆ ... ಅಜಿತ್ ಹಂದೆ ಅರ್ಜುನ ಮತ್ತು ಇಂದ್ರ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ .. (ಶ್ರೀರಸ್ತು ಶುಭಮಸ್ತು ಮಾಧವ ಪಾತ್ರಧಾರಿ, ನಿನ್ನೆ ಪರ್ವ ನಾಟಕದ ಪ್ರಸ್ತುತಿಯನ್ನು ನೋಡಲು, ಸುಧಾರಾಣಿಯವರೂ ಬಂದಿದ್ದು ಎಲ್ಲರ ಗಮನ ಸೆಳೆಯಿತು!)
ಭೀಮ ಹಾಗೂ ಕೃಷ್ಣ ದ್ವೈಪಾಯನ ಪಾತ್ರವನ್ನು ಕೀರ್ತಿಭಾನು ಅಮೋಘವಾಗಿ ನಿರ್ವಹಿಸಿದ್ದಾರೆ.. ಪ್ರಕಾಶ್ ಬೆಳವಾಡಿ ನಿನ್ನೆಯ ಪ್ರದರ್ಶನದಲ್ಲಿ ದ್ರೋಣರ ಪಾತ್ರ ನಿರ್ವಹಿಸಿದ್ದರು.. ವರದಿಗಾರ ಸಂಜಯನ ಪಾತ್ರದ ಬಳಕೆಯನ್ನು ನಿರ್ದೇಶಕರು ಚನ್ನಾಗಿ ಮಾಡಿದ್ದಾರೆ... ಈಗಿನ ಕಾಲದ ನ್ಯೂಸ್ ನೋಡಿದಂತೆಯೇ ಅನಿಸುತ್ತೆ ಹಿನ್ನೆಲೆ ಸಂಗೀತದ ಚಮತ್ಕಾರದಿಂದ.. (ಹಿನ್ನೆಲೆ ಸಂಗೀತ: ರವಿ ಮೂರೂರು, ಕೃಷ್ಣ ಚೈತನ್ಯ, ಬಹಳ ಚೆನ್ನಾಗಿದೆ.. ಅಬ್ಬರವಿಲ್ಲ.. ಸನ್ನಿವೇಶಕ್ಕೆ ತಕ್ಕಂತ ಮಾಧುರ್ಯ/ಧ್ವನಿ ವರ್ಧನೆ ) ಕರ್ಣನ ಪಾತ್ರವೂ ಚೆನ್ನಾಗಿ ಮೂಡಿ ಬಂದಿದೆ ... (ಕೃಷ್ಣ ಹೊಂಬಾಳೆ) ಉಪಪಾಂಡವರನ್ನು ಮಾಸ್ಕ್ ಬಳಸಿ ತೋರಿಸಿರುವ ತಂತ್ರ ಸಮಯೋಚಿತ ಹಾಗೂ ಪ್ರಸ್ತುತ ... ದ್ರೌಪಾದಿಯಾಗಿ ಸಿರಿ ರವಿಕುಮಾರ್ ಗಮನ ಸೆಳೆಯುತ್ತಾರೆ ... ಧೃತರಾಷ್ಟ್ರ, ಗಾಂಧಾರಿ ಪಾತ್ರಗಳೂ ನೋಡುಗರ ಮನಸೆಳೆಯುತ್ತವೆ ... ದ್ರೋಣ-ಏಕಲವ್ಯರ ಪ್ರಸಂಗ ನಾಟಕದಲ್ಲಿ ಚನ್ನಾಗಿ ಮೂಡಿ ಬಂದಿದೆ.. ಕೃಷ್ಣ ಸಂಧಾನದ ದೃಶ್ಯವನ್ನು ಪ್ರೇಕ್ಷಕರ ಮಧ್ಯದಿಂದ ಒಡ್ಡೋಲಗ ಸಹಿತ ಕೃಷ್ಣ ಬರುವುದು "ವಾವ್ !" ಎನ್ನುವಂತಿದೆ ... ವಿದುರ ಪಾತ್ರಧಾರಿಯ ಅಭಿನಯವೂ ಚೆನ್ನಾಗಿತ್ತು .. ಭೀಷ್ಮರು ಶರಶಯ್ಯೆ ಏರುವ ದೃಶ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ ತೋರಿಸಿದ್ದಾರೆ ... ಪ್ರಸಾದ್ ಬಿಡ್ಡಪ್ಪರವರ ವಸ್ತ್ರವಿನ್ಯಾಸ ಸರಳವಾಗಿಯೂ, ಪರಿಣಾಮಕಾರಿಯಾಗಿಯೂ ಇದೆ... ಬೆಳಕು ನಿರ್ವಹಣೆ ಸಹ ಪರಿಣಾಮಕಾರಿಯಾಗಿದೆ...
ದ್ರೌಪದಿಯ ವಸ್ತ್ರಾಪಹರಣ ಸನ್ನಿವೇಶವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತೋರಿಸಬಹುದಿತ್ತು ... ಅಷ್ಟು ಅಚ್ಚೊತ್ತಲಿಲ್ಲ ... ಭೋಜನ ವಿರಾಮದ ನಂತರ ಬಂದ ಕೃಷ್ಣದ್ವೈಪಾಯನ - ಭೀಷ್ಮರ ಭೇಟಿಯ ದೃಶ್ಯ ಅನೇಕರಿಗೆ ಲಾಲಿ ಹಾಡಿದಂತಿತ್ತು... (Audience were sleepy ...) ಭೀಮ-ಹಿಡಂಬಿಯರ ಪ್ರೇಮ ಪ್ರಸಂಗದ ಸನ್ನಿವೇಶ, ಅರ್ಜುನ ಸ್ವಯಂವರದಲ್ಲಿ ಗೆದ್ದು ತಂದ ದ್ರೌಪದಿಯನ್ನು, ಐದೂ ಜನರು ವಿವಾಹವಾಗಿರೆಂದು ಕುಂತಿ ತಿಳಿ ಹೇಳಿದ ಪ್ರಸಂಗ, ತನ್ನ ಐದು ಮಕ್ಕಳ ಒಗ್ಗಟ್ಟನ್ನು ಉಳಿಸಲು ಕುಂತಿ ಮಾಡಿದ ತಂತ್ರ, ಕಿಶೋರಿಯಾದ ದ್ರೌಪದಿಗೆ ಐದು ಜನ ಗಂಡಂದಿರ ಸುಖದ ಆಮಿಷವೊಡ್ಡಿ ಪುಸಲಾಯಿಸಿದ ಕುಂತಿಯ ಸ್ವಾರ್ಥ, ಅನುಭವವಾದ ಮೇಲೆ ಕುಂತಿಯನ್ನು ದ್ರೌಪದಿ ಮನಸಿನಲ್ಲೇ ಶಪಿಸುವ ಸನ್ನಿವೇಶಗಳನ್ನು ಸುಂದರ ದೃಶ್ಯಗಳಾಗಿಸುವ ಅವಕಾಶವಿದ್ದರೂ ಕೈಚೆಲ್ಲಿದ್ದಾರೆ.. (ಸಮಯದ ಅಭಾವ ತೋರಿರಬಹುದು... ಈಗಾಗಲೇ ೮ ಗಂಟೆಗಳ ಸುದೀರ್ಘ ಪ್ರಯೋಗ)
ಒಟ್ಟಿನಲ್ಲಿ ಹೇಳಬೇಕೆಂದರೆ ... ಇಡೀ ನಾಟಕ ನೋಡಿದ ಮೇಲೆ ಪರ್ವ ಕಾದಂಬರಿಯ ಪುಟಗಳನ್ನು ದೃಶ್ಯ ಸಹಿತ ತಿರುವಿ ಹಾಕಿದ ಅಮೋಘ ಅನುಭವ ನೀಡುತ್ತದೆ... ನಾಟಕವನ್ನು ನೋಡದಿರುವ ಆಸಕ್ತರು ಸಮಯ ಮಾಡಿಕೊಂಡು ನಾಟಕವನ್ನು ಮುಂದಿನ ದಿನಗಳಲ್ಲಿ ನೋಡಲೇಬೇಕೆಂಬುದು ನನ್ನ ಮನವಿ. ಪರ್ವ ನಾಟಕ ಹಿಂದೀ ಮತ್ತು ಇಂಗ್ಲಿಷ್ ಭಾಷೆಗಳಲ್ಲೂ ಮೂಡಿ ಬರಲಿ, (ಇಂಗ್ಲಿಷ್ ಪ್ರಯೋಗ ಈಗಾಗಲೇ ನಡೆದಿದೆ). ರಂಗ ಪ್ರಯೋಗಕ್ಕೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮನ್ನಣೆ ದೊರೆಯಲಿ ಎಂದು ಹಾರೈಸುತ್ತೇನೆ.
