Wednesday, December 4, 2019

ದಿನನಿತ್ಯದ ಕೆಲಸವೂ ಮುಖ್ಯ ಮಂತ್ರಿ ಚಂದ್ರುವೂ !!!


ನಮ್ಮ ದಿನ ಸಂತೋಷವಾಗಿ ಯಾವುದೇ ಅಡೆತಡೆ ಇಲ್ಲದೇ ನೆಮ್ಮದಿಯಾಗಿ ಸಾಗಲು ಏನೇನು ಬೇಕು?
ಯಾವ್ಯಾವುದನ್ನು ಯೋಚಿಸುತ್ತಿದ್ದೀರಿ.. ? ಊಟ, ತಿಂಡಿ, ನಿದ್ರೆ, ಸುಖ, ಸಂತೋಷ, ಹಣ ... ಮತ್ತೆ ಇನ್ನೇನು ? ನಾನು ಹೇಳಲು ಹೊರಟಿರುವುದು ಇದ್ಯಾವುದೂ ಅಲ್ಲ.. ನಮ್ಮ ದಿನ ಸುಗಮವಾಗಿ ಸರಾಗವಾಗಿ ಸಾಗಬೇಕು ಎಂದರೆ ಆ ದಿನದ ನಿತ್ಯಕರ್ಮ ಸರಿಯಾಗಿ ಆಗಿರಬೇಕು. ಅಯ್ಯೋ ಅದೇ ರೀ ... ಒಂದು ದಿನ ಸಂಡಾಸಿಗೆ ಹೋಗಿಲ್ಲ ಎಂದರೆ ಆವತ್ತಿನ ದಿನ ನೆನೆಸಿಕೊಳ್ಳಿ ಒಂದು ಸಲ... ಎಷ್ಟು ತೊಂದರೆ ಅಲ್ವೇ .. ನಾನು ಮೊದಲು ತಿಳಿಸಿದ ಎಲ್ಲವೂ ಇದ್ದರೂ, ಈ ಕೆಲಸ ಆಗಿಲ್ಲ ಅಂದ್ರೆ ಇಡೀ ದಿನ ಡಲ್ಲು ಹೊಡೀತೀರಿರುತ್ತೆ. ಯಾವ ಕೆಲಸವೂ ಸರಿಯಾಗಿ ಆಗುವುದಿಲ್ಲ. ಬೇರೆ ಏನೇ ಕೆಲಸ ಮಾಡುತ್ತಿದ್ದರೂ ಇವತ್ಯಾಕೋ ಆಗ್ಲಿಲ್ವಲ್ಲಪ್ಪ ಅಂತ ಅದರ ಕಡೆಗೇ ಗಮನ ಹರಿಯುತ್ತೆ.. ನಿಜ ತಾನೇ? ನೀವೇನಾದರೂ ಛಿ ಛೀ ಇಲ್ಲಪ್ಪ ಏನು ಅಸಹ್ಯ ನಮಗಾ ರೀತಿ ಆಗುವುದಿಲ್ಲ ಅಂದ್ರೆ ನೀವು ಮನುಷ್ಯರೇ ಅಲ್ಲ, ದೇವರು. ಇಲ್ಲ ದೇವಮಾನವರು. ಏನೇ ಭಕ್ಷ್ಯ ಭೋಜ್ಯ ಮನೆಯಲ್ಲಿ ಮಾಡಿದ್ದರೂ, ತಿನ್ನುವ ಮನಸ್ಸಿದ್ದರೂ ತಿನ್ನಲಾಗುತ್ತದೆಯೇ? ನೆಮ್ಮದಿಯಾಗಿ ಇತರ ಕೆಲಸಗಳು ಸಾಗುತ್ತದೆಯೇ? ಖಂಡಿತಾ ಇಲ್ಲ ...

ಈ ಸಂಡಾಸಿನ ವಿಷಯದಲ್ಲಿ ಎರಡು ಥರ ... ಬರದಿದ್ದರೂ ಕಷ್ಟ, ಅತಿಸಾರವಾದರೂ ಬಲು ಕಷ್ಟ... ಈ ಮಳೆಗಾಲ, ಚಳಿಗಾಲದಲ್ಲಂತೂ ಅಲ್ಲಿ ಇಲ್ಲಿ ಕುರುಕಲು ತಿಂಡಿ, ಪಾನೀಪೂರಿ ತಿಂದು, food poison ಆಗಿ ಬಹಳ ಬೇಗ Diarrhea dehydration, ಆಗಿಬಿಡುತ್ತದೆ.
ನಮ್ಮ ಶಿವಮೊಗ್ಗದಲ್ಲಿ ನಮ್ಮನೆಗೆ ಹೋಗುವ ದಾರಿಯಲ್ಲಿ ಒಂದು ಮೋರಿಯ ಬಳಿ ಗಾಡಿಯಲ್ಲಿ ಬಜ್ಜಿ ಬೋಂಡಾ ಮಾಡಿ ಮಾರುತ್ತಾರೆ. ಪಕ್ಕದಲ್ಲೇ ಒಂದು ಕ್ಲಿನಿಕ್ ಇದೆ. ಏನು ಸೋಜಿಗವೋ, ಕಾಕತಾಳೀಯವೋ ಗೊತ್ತಿಲ್ಲ, ಆ ಬೋಂಡಾದ ವ್ಯಾಪಾರಿ ಹೆಸರು ಮಾಯಣ್ಣ, ಕ್ಲಿನಿಕ್ಕಿನಲ್ಲಿ ಡಾಕ್ಟರ್ನ ಹೆಸರು ಡಾ. ಮಾಯಪ್ಪ. ಮಳೆಗಾಲದಲ್ಲಿ, ಚಳಿಗಾಲದಲ್ಲಿ ಬೋಂಡಾ ಬಜ್ಜಿ ತಿನ್ನುವವರು ಕೇಳಬೇಕೆ ? ಮಾಯಣ್ಣನಿಗೆ ವ್ಯಾಪಾರವೋ ವ್ಯಾಪಾರ. ಒಂದೆರಡು ದಿನಗಳ ಬಳಿಕ ಮಾಯಪ್ಪನ ಶಾಪ್ ಪೇಷಂಟ್ಗಳಿಂದ ಗಿಜಿಗುಡುತ್ತಿರುತ್ತದೆ. ಇವರಿಬ್ಬರೂ ಏನಾದರೂ deal ಮಾಡಿಕೊಂಡಿದ್ದಾರೇನೋ ಅಂತ ನನಗೆ ಮೊದಲಿಂದಲೂ ಅನುಮಾನ. ಆದರೆ ಏಕೋ ಒಮ್ಮೆಯೂ ಅಲ್ಲಿಗೆ ಹೋಗುವ ಧೈರ್ಯ, ಕೇಳುವ ಧೈರ್ಯ ಇನ್ನೂ ಮಾಡಿಲ್ಲ. ಬೇಸಿಗೆಯಲ್ಲಿ ಇಬ್ಬರೂ ನೊಣ ಹೊಡೆಯುತ್ತಿರುತ್ತಾರೆ !!!



ಇದು ಅತಿಸಾರದ ಕಥೆಯಾದರೆ, constipation (ಮಲಬದ್ಧತೆ) ಇರುವವರದು ಇನ್ನೊಂದು ಥರ. ಈ constipation ಇರುವಂಥ ವಯಸ್ಸಾದವರೊಬ್ಬರು ಮನೆಯಲ್ಲಿದ್ದು ಬಿಟ್ಟರೆ ಬಹಳ ಕಷ್ಟ. ಅವರಿಗೆ ಯಾವ ತರಹದ ಆಹಾರ ಕೊಡಬೇಕಾದರೂ ಭಯವಾಗುತ್ತದೆ. ಎಲ್ಲದಕ್ಕೂ ನನಗೆ motion ಆಗೋಲ್ಲ ಅಂತ ಹೇಳ್ತಾರೆ. ಚಪಾತಿ ಮಾಡಿದರೆ ಉಷ್ಣವಾಗುತ್ತೆ motion ಆಗೋಲ್ಲ.. ಅದು ಬೇಡ... ದೋಸೆ ಇಡ್ಲಿ ಅಂದ್ರೆ ವಾಯು ಬೇಡ .. .. motion ಆಗೋಲ್ಲ. ರೊಟ್ಟಿ ಮಾಡೋಣ ಅಂದ್ರೆ ಅದು ಗಟ್ಟಿಯಾಗಿರತ್ತೆ motion ಆಗೋಲ್ಲ ಬೇಡ.. ಮತ್ತಿನ್ನೇನು ತಿಂಡಿ ಮಾಡೋದು ... ದೇವರೇ ಬಲ್ಲ ... ಹಣ್ಣು ಹಂಪಲು, ಬಾಳೆಹಣ್ಣು ಕೊಡೋಣವೆಂದರೆ diabetes ಅಡ್ಡಿ ಬರುತ್ತದೆ. ಸೊಪ್ಪು ತರಕಾರಿಯೇ ಮೂರು ಹೊತ್ತು ಕೊಟ್ಟರೆ ಅದನ್ನೇ ತಿನ್ನಲು ಬೇಜಾರು ಅಂತಾರೆ. ಒಂದು ದಿನದ ಅಡಿಗೆಯಲ್ಲಿ ಇವರನ್ನು ಒಪ್ಪಿಸಿ ಆ ದಿನದ motion ಅವರಿಗೆ ಆಗದೇ ಹೋದರೆ, ಮನೆಯವರಿಗೆಲ್ಲಾ loosemotion ಶುರುವಾದಂತಾಗಿರುತ್ತದೆ. ಪೀಕೂ ಚಿತ್ರದ ಅಮಿತಾಭ್ ನೆನಪಾದ್ರಾ?!!!



ನಾವು ಸೇವಿಸಬೇಕಾದ ಆಹಾರದ ಪ್ರಾಮುಖ್ಯತೆ ಅರಿತು ಹಿತ ಮಿತವಾಗಿ ತಿನ್ನುವ ಅಭ್ಯಾಸ ರೂಢಿಸಿಕೊಂಡರೆ ಇಂಥ ಯಾವ ತೊಂದರೆಯೂ ಆಗುವುದಿಲ್ಲ. ಆರೋಗ್ಯವೇ ಭಾಗ್ಯ!!!

ಮುಗಿಸುವ ಮುನ್ನ:  title ನಲ್ಲಿ ಬಂದ ಮುಖ್ಯಮಂತ್ರಿ ಚಂದ್ರುಗೂ ಇದಕ್ಕೂ ಏನು ಸಂಬಂಧ! ಅವರು ಇಲ್ಲಿ ಬರಲೇ ಇಲ್ವಲ್ಲ ಅಂತ ಯೋಚಿಸ್ತಿದೀರಾ!!! ನೀವು ಗಣೇಶನ ಮದುವೆ ಸಿನಿಮಾ ನೋಡಿದ್ದರೆ ಅಲ್ಲಿ ಸಂಡಾಸಿಗೆ ಹೋದಾಗ ಮುಖ್ಯಮಂತ್ರಿ ಚಂದ್ರು ಒಂದು ಹಾಡು ಹೇಳುತ್ತಾರೆ... 'ತಿಂದಿದ್ದೆಲ್ಲ ಅರಗಿದ ಮೇಲೆ ಆದದ್ದೆಲ್ಲ ಒಳಿತೇ ಆಯಿತು... !!!' ಇನ್ನೊಮ್ಮೆ ಚಿತ್ರ ನೋಡಿ ಜ್ಞಾಪಕ ಬರುತ್ತೆ !!

                                                                                                                signing off


2 comments:

  1. ಆರೋಗ್ಯ ವೆ ಭಾಗ್ಯ ಹಣ ಅಂತಸ್ತು ಹುದ್ದೆ ಯಾವುದೆ ಇದ್ದರೂ ಆರೋಗ್ಯ ಇಲ್ಲದಿದ್ದರೆ ಎಲ್ಲವು ಶೂನ್ಯ.
    ಮುಖ್ಯವಾಗಿ ಹೊಟ್ಟೆ ಕಿಚ್ಚು ಮನುಷ್ಯ ನ ಮೊದಲ ಶತ್ರು .
    ನಂತರ ದುರಾಸೆ ನಂತರ ವ್ಯಾಮೋಹ ಈ ಮೂರು ಮನುಷ್ಯ ನನ್ನು ಅಣು ಅಣು ವಾಗಿ ಕೊಲ್ಲುತ್ತವೆ.
    ರಮೇಶ್ ಕೃಷ್ಣ

    ReplyDelete