Wednesday, January 6, 2021

ಕಣ್ಣಾಮುಚ್ಚಾಲೆ - ಸಸ್ಪೆನ್ಸ್ ಥ್ರಿಲ್ಲರ್ (Small Story)

 ಡಿಟೆಕ್ಟಿವ್ ಅಮರ್, ಹೊಟೇಲ್‌ ರೂಮ್‌ನ ಕಿಟಕಿಯಿಂದ, ಎದುರಿಗಿರುವ ಮರದ ಎಲೆಗಳಿಂದ ಮಳೆಹನಿಗಳು ತೊಟ್ಟಿಕ್ಕುವುದನ್ನು ನೋಡುತ್ತಾ ನಿಂತಿದ್ದ. ಆ ನೀರವ ಮೌನದಲ್ಲಿ ಹನಿಗಳು ಭೂಮಿಯನ್ನು ಅಪ್ಪಳಿಸುವ ಶಬ್ದಗಳು ಸ್ಪಷ್ಟವಾಗಿ ಕೇಳುತ್ತಿದ್ದವು. ಅವನ ಆಲೋಚನಾ ಲಹರಿಯಲ್ಲಿ ಅದೊಂದೇ ಚಿಂತೆ….. “3 ದಿನದ ಹಿಂದೆ ನಡೆದ ಪ್ರಖ್ಯಾತ ನಾಯಕ ನಟಿ ಅಂಜನಾಳ ಸಾವು ಹೇಗೆ ಸಂಭವಿಸಿರಬಹುದು ಎಂದು...”

ರೂಮಿನ ಕಾಲಿಂಗ್ ಬೆಲ್ ಸದ್ದು ಅಲ್ಲಿನ ನೀರವತೆಯನ್ನು ಮರೆಸಿ, ಅಮರ್‌ನನ್ನು ವಾಸ್ತವಕ್ಕೆ ಕರೆ ತಂದಿತು. ಬಾಗಿಲು ತೆಗೆಯುತ್ತಿದ್ದಂತೆ ಒದ್ದೆ ಛತ್ರಿ ಕೊಡವುತ್ತಾ ಒಳಬಂದದ್ದು ಅವನ ಸಹಾಯಕ ಅಜಿತ್. 

“ತಗೋ ಬಿಸಿಬಿಸಿ ಪಕೋಡಾ……  ಕೆಳಗಿನ ಗಾಡಿ ಅಂಗಡಿಯದು..  ರೂಂ ಸರ್ವೀಸ್‌ಗೆ 2 ಖಡಕ್ ಟೀ ತರಲು ಹೇಳಿದ್ದೇನೆ… “ ಎಂದನು ಅಜಿತ್. 

“2 ದಿನಗಳಿಂದ ಬರೀ ಪಕೋಡಾ ತಿಂದು ಟೀ ಕುಡಿದದ್ದೇ ಬಂತು… .. ನಾನು ಹೇಳಿದ ಕೆಲಸ ಆಯಿತಾ…. “ ರೇಗಿದ ಅಮರ್. 

ಸಕಲೇಶಪುರದ ಛಳಿಗಾಳಿ ಮಳೆಗೆ ಪಕೋಡಾ, ಟೀ ಇಲ್ಲದೇ ಹೋದರೆ ನಾವು ಫ್ರೀಜ್ ಆಗುತ್ತಿದ್ವಿ…  ನಿನ್ನ ಕೆಲಸ ಆಗಿದೆ… ಪೋಸ್ಟ್ ಮಾರ್ಟಮ್ ರಿಪೋರ್ಟ್ ತಂದಿದ್ದೇನೆ ತಗೋ …” ಎಂದು ಕೈಲಿದ್ದ ವರದಿಯನ್ನು ಅಮರ್ ಕೈಗಿತ್ತನು ಅಜಿತ್. 

ನಡೆದದ್ದಿಷ್ಟು….

"ಸಕಲೇಶಪುರದಲ್ಲಿ"ಕಣ್ಣಾಮುಚ್ಚಾಲೆ " ಚಿತ್ರದ ಶೂಟಿಂಗ್ ಗೆ ತಂಡದೊಂದಿಗೆ ಬಂದಿದ್ದರು ಪ್ರಖ್ಯಾತ ಯುವ ನಿರ್ದೇಶಕ ಸುಕುಮಾರ್ . ನಾಯಕ ರಂಜಿತ್, ನಾಯಕಿ ಅಂಜನಾ. ಇವರ ಕಾಂಬಿನೇಷನ್  ಹಿಂದಿನ ಚಿತ್ರ "ಮಳೆಹನಿ" ಸೂಪರ್ ಹಿಟ್ ಆಗಿತ್ತು. ಅಂಜನಾಳ ತಾಯಿ, ಪ್ರಸಿದ್ಧ ಡಾಕ್ಟರ್, ಈ.ಏನ್.ಟಿ ತಜ್ಞೆ  ಡಾ.ವಂದನಾ ರಾವ್ ಅವರೇ ಎರಡೂ ಚಿತ್ರಗಳ ನಿರ್ಮಾಪಕಿ.  ಶೂಟಿಂಗ್ ಹಂತದಲ್ಲಿದ್ದ "ಕಣ್ಣಾಮುಚ್ಚಾಲೆ" ಚಿತ್ರದ ಮೇಲೆ ಭಾರೀ ನಿರೀಕ್ಷೆಯಿತ್ತು. ಚಿತ್ರೀಕರಣವೆಲ್ಲಾ ಸಂಪೂರ್ಣಗೊಂಡು, ಬಾಕಿಯಿದ್ದ ಹಾಡೊಂದನ್ನು ಶೂಟ್ ಮಾಡಲು, ಸಕಲೇಶಪುರ ಲೊಕೇಶನ್ ಗೆ ಬಂದಿತ್ತು ಚಿತ್ರತಂಡ. ೨ ದಿನ ಶೂಟಿಂಗ್ ಮುಗಿದ ನಂತರ, ಅಂದು ರಾತ್ರಿ, ನಾಯಕಿ ಅಂಜನಾ ನಿಗೂಢವಾಗಿ ಹೆಣವಾಗಿದ್ದಳು. ಅವಳು ಉಳಿದುಕೊಂಡಿದ್ದ ಪ್ರಶಾಂತ್ ಹೊಟೇಲಿನ ರೂಮಿನಲ್ಲಿ ಶವವಾಗಿ ಪತ್ತೆಯಾಗಿದ್ದಳು. ಬಿಟ್ಟ ಕಣ್ಣು ಬಿಟ್ಟಂತೆ  ಆಕಾಶದೆಡೆಗೆ ನೇರ ದೃಷ್ಟಿಇತ್ತು, ದೇಹದ ಮೇಲೆ ಯಾವುದೇ ಗಾಯವಾದ ಕಲೆಯಿಲ್ಲ, ರೂಮಿಗೆ ಯಾರೂ ಬಂದು ಹೋದ ಸುಳಿವಿಲ್ಲ.. ಹಾಸಿಗೆಯ ಮೇಲೆ ಶವವಾಗಿ ಪತ್ತೆಯಾಗಿದ್ದಳು ಅಂಜನಾ... "

ಪೊಲೀಸ್ ಇಲಾಖೆ, ಖ್ಯಾತ ಡಿಟೆಕ್ಟಿವ್ ಅಮರ್ ನಾಥ್ ಸಹಾಯ ಕೋರಿದ್ದರು. ಮರಣೋತ್ತರ ಪರೀಕ್ಷೆಯಲ್ಲೂ ಏನೂ ಸುಳಿವು ಸಿಕ್ಕುವಂತಹ ಮಾಹಿತಿಯಿಲ್ಲ. ಸಾವಿನ ಕಾರಣ 'ಆಸಫಿಕ್ಸಿಯಾ' ಎಂದಷ್ಟೇ ಬರೆದಿದ್ದಾರೆ. ಉಳಿದೆಲ್ಲವೂ ನಾರ್ಮಲ್ ಎಂದೇ ಹೇಳುತ್ತೆ.  ಅಂದರೆ ಉಸಿರಾಟ ನಿಂತದ್ದರಿಂದ ಸಾವಾಗಿದೆ. ಉಸಿರಾಟವನ್ನು ಬಲವಂತವಾಗಿ ನಿಲ್ಲಿಸಿರುವಂತಹ ಯಾವ ಕುರುಹೂ ಇಲ್ಲ. ಎಲ್ಲವೂ ಗೋಜಲಾಗಿ ಕಂಡಿತು ಅಮರ್ ಗೆ.  ಅವರದೇ ಸ್ವಂತ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾ. ತಾಯಿಯೂ ಜೊತೆಗಿದ್ದರು, ಹೀಗೆ ರಾತ್ರಿ ಮಲಗಿದ್ದ ಮಗಳು, ಈ ರೀತಿಯಾಗಿ ಶವವಾಗಿದ್ದಾಳೆ ಎಂದರೆ ಏನರ್ಥ.. ?

"ನಿನಗೇನಾದರೂ ಕ್ಲೂ ಸಿಕ್ತಾ ..?" ಅಜಿತ್ ನನ್ನ ಕೇಳಿದ ಅಮರ್. 




"ಏನು ಮಣ್ಣಂಗಟ್ಟಿಯೂ ಸಿಕ್ಕಿಲ್ಲ ...  ಈ ಭಾರೀ ಮಳೆಯಲ್ಲಿ, ಯಾವ ಪಬ್ಲಿಕ್ ಟ್ರಾನ್ಸ್ಪೋರ್ಟೂ ಇಲ್ಲದ ಊರಲ್ಲಿ, ನೀನು ಅರೆಂಜ್ ಮಾಡಿದ್ದ ಡಬ್ಬಾ ಬೈಕಿನಲ್ಲಿ ೪ ಮೈಲಿ ದೂರದ  ಆ ಸರ್ಕಾರಿ ಆಸ್ಪತ್ರೆಗೆ ಹೇಗಪ್ಪಾ ಹೋಗೋದೂ ಅಂತ ಒದ್ದಾಡುತ್ತಿದ್ದೆ ... ಆಗ ಆ ಹೀರೊಯಿನ್ ತಾಯಿ ಪುಣ್ಯಾತಗಿತ್ತಿ ಡಾಕ್ಟರ್ ಅಮ್ಮನ ಕಾರ್ ಅಲ್ಲಿ ಡ್ರಾಪ್ ಸಿಕ್ತು ಅಷ್ಟೇ !!. 

ನೀನೇನೆೇ  ಹೇಳು ಅಮರ್, ಹೀರೊಯಿನ್ ಗಿಂತ ಆಅವರಮ್ಮನೇ ಸಖತ್ತಾಗಿದ್ದಾರೆ..  ಏನ್ ಸ್ಟೈಲು, ಏನ್ ಕಥೆ.. ವಯಸ್ಸಿದ್ದಿದ್ರೆ ಆ ಯಮ್ಮನ್ನೇ  ನಾಯಕಿ ಮಾಡ್ತಿದ್ರೇನೋ ಆ ನಿರ್ದೇಶಕ ಸುಕುಮಾರ್. ... " ತನ್ನ  ತಿಳಿಸಿದ ಅಜಿತ್. 

"ಕಾರ್ ನಲ್ಲಿಅವರು ಎಲ್ಲಿಗೆ ಹೊರಟಿದ್ದರು ? ಜೊತೆಗೆ ಯಾರಾದ್ರೂ ಇದ್ರಾ ...?" ಕೇಳಿದ ಅಮರ್. 

"ಡೈರೆಕ್ಟರ್ ಸಾಹೇಬ್ರು ಇದ್ರು.. ಈ  ರೀತಿ ಅನಾಹುತ ಆಯ್ತಲ್ಲ.. ಮುಂದೆ ಸಿನೆಮಾ ರಿಲೀಸ್ ಹೇಗ್ ಮಾಡೋದು ಅಂತ ಡಿಸ್ಕಸ್ ಮಾಡೋಕೆ ಅಲ್ಲಿಯೇ ಆಸ್ಪತ್ರೆ ಹತ್ತಿರವಿರುವ ಐ .ಬಿ ಗೆ ಹೋದ್ರು...  " ವಿಷಯ ತಿಳಿಸಿದ ಅಜಿತ್. 

"ಸಿಕ್ತು ಭಾರೀ ಕ್ಲೂ ... " ಕಿರುಚಿದ ಅಮರ್. 

"ಏನ್ ಅಂಥಾದ್ದು ...? " ಕೇಳಿದ ಅಜಿತ್. 

"ನಡಿ. .. ನನ್ನ ಗೆಸ್ಸ್ ಕರ್ರೆಕ್ಟ್ ಆಗಿದ್ರೆ ಅಲ್ಲೇ ಸಿನೆಮಾನೆೇ  ತೋರಿಸ್ತೀನಿ .. "  ಅರ್ಜೆಂಟ್ ಆಗಿ ಈಗ ನಾವು ಐ .ಬಿ ಕಡೆಗೆ ಹೋಗ್ಬೇಕು.. ಎಂದು, ಹೊಟೇಲ್ ಮ್ಯಾನೇಜರ್ ನಲ್ಲಿ ಮನವಿ ಮಾಡಿಕೊಂಡು, ಅವರ ಕಾರಿನಲ್ಲೇ ಇಬ್ಬರೂ ಹೊರಟರು. 

ಅಲ್ಲಿ ಬಂದು ಸದ್ದಿಲ್ಲದೇ ವಂದನಾ, ಸುಕುಮಾರ್ ಇಬ್ಬರೂ ಇದ್ದ ರೂಮಿನ ಕಿಟಕಿಯಲ್ಲಿ ಇಣುಕಿ ನೋಡಿದರು. ತೀರಾ ನಿಕಟವಾದ  ಪ್ರೇಮಿಗಳಂತೆ  ಜೊತೆಗಿದ್ದ ಅವರನ್ನು ನೋಡಿದ ಅಜಿತ್ ಗೆ ದಂಗು ಬಡಿದಂತಾಗಿತ್ತು. 

"ಎಲಾ ಇವರಾ.. ಈ ವಮ್ಮನ ವಯಸ್ಸೇನು .. ಆ ಹುಡುಗನ ಜೊತೆ ಚಕ್ಕಂದ ಆಡ್ತಿದ್ದಾಳಲ್ಲಾ ... " ಆಶ್ಚರ್ಯ ವ್ಯಕ್ತಪಡಿಸಿದ ಅಜಿತ್. 

"ಎಲ್ಲಿ ವಿಡಿಯೋ ರೆಕಾರ್ಡ್ ಮಾಡು, ಹೇಗೆ ಪ್ರಾಣ ಹೋಗಿದೆ ಅಂತ ಆ ಯಮ್ಮನೇ ಹೇಳ್ತಾಳೆ.. ಇದನ್ನೇ ನಾವು "ಕಣ್ಣಾಮುಚ್ಚಾಲೆ" ಸಿನಿಮಾ ಅಂತ ರಿಲೀಸ್ ಮಾಡೋಣ.. 

ರೆಕಾರ್ಡ್ ಮೋಡ್ ಆನ್... 

ಸುಕುಮಾರ್: ನನಗೋಸ್ಕರ ಎಷ್ಟೊಂದು ರಿಸ್ಕ್ ತಗೊಂಡೆ ಡಾರ್ಲಿಂಗ್.... ನಿನಗಿದೆಲ್ಲ ಹೇಗೆ ಸಾಧ್ಯ ಆಗುತ್ತೆ.. 

ವಂದನಾ: "ಥ್ರಿಲ್ ಗಾಗಿ ಡಾರ್ಲಿಂಗ್ ... ನನ್ನ ಜೀವನದಲ್ಲಿ ನಿನ್ನ ಪರಿಚಯವಾಗಿದ್ದೇ ಒಂದು ಥ್ರಿಲ್.. ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ಕಳ್ಕೊಂಡು, ವಿರಹ ವೇದನೆ ಅನುಭವಿಸ್ತಿದ್ದ ನನಗೆ ಈಗ ನೀನು ಸಿಕ್ಕಿರುವುದೇ  ನನ್ನ ಜೀವನದ ರೋಮಾಂಚಕ ಘಟ್ಟ. ಈ ಹಂತದಲ್ಲಿ ನಮ್ಮಿಬ್ಬರ ಮಧ್ಯೆ ಯಾರೇ ಬಂದ್ರೂ, ನಾನು ಅವರನ್ನು ಸಹಿಸಲ್ಲ..  ಕೊನೆಗೆ ಅವಳು ನನ್ನ ಮಗಳಾದರೂ ಸರಿ. 

ಸುಕುಮಾರ್: ಅದು ಸರಿ.. ಆ ಡಿಟೆಕ್ಟಿವ್ ಅಸಿಸ್ಟೆಂಟ್ ಗೆ ಫೋರೆನ್ಸಿಕ್ ಲ್ಯಾಬ್ ಕಡೆ ಡ್ರಾಪ್ ಕೊಟ್ಟೆಯಲ್ಲ...  ಪೋಸ್ಟ್ ಮಾರ್ಟಮ್ ರಿಪೋರ್ಟ್ ನಲ್ಲಿ ಕೊಲೆ ಅಂತ ಗೊತ್ತಾಗಲ್ವಾ.. 

ವಂದನಾ: ನಾನ್ಯಾರೋ ಫೂಲ್ ಅಂತ ತಿಳ್ಕೊಂಡ್ಯಾ ಸುಕ್ಕು...  ನಾನೊಬ್ಬ  ಡಾಕ್ಟರ್.. ಅದರಲ್ಲೂ    E.N. T ಸ್ಪೆಷಲಿಸ್ಟ್ . ನಾನು ಅಂಜನಾಳ ಮೂಗು ಬಾಯಿಗೆ ಬಟ್ಟೆ ಹಾಕಿ, ಒದ್ದೆ ಮಾಡಿ, ನಂತರ ಉಸಿರು ನಿಲ್ಲಿಸಿದ್ದೇನೆ. ಆಗ ಕುತ್ತಿಗೆ ಮುರಿಯುವುದಾಗಲೀ, ಇತರ ಗುರುತುಗಳಾಗಲೀ ಯಾವುದೂ ಆಗೋಲ್ಲ. ಉಸಿರಾಡೋಕ್ಕೆ ಆಕ್ಸಿಜನ್ ಸರಿಯಾಗಿ ಸಿಗದೇ ಸಾವಾಗುತ್ತೆ ಅಷ್ಟೇ ... "

ಸುಕುಮಾರ್: "ಯೂ ಆರ್ ಗ್ರೇಟ್... !  ಐ ಲವ್ ಯೂ ವೆರಿ ಮಚ್ ... "

ಇದಿಷ್ಟನ್ನೂ ರೆಕಾರ್ಡ್ ಮಾಡಿದ ಅಮರ್ - ಅಜಿತ್ , ಒಳ್ಳೆ ಸಸ್ಪೆನ್ಸ್ ಥ್ರಿಲ್ಲರ್ ಸಿನೆಮಾ ಜನರಿಗೆ ತೋರಿಸಲು ಸಜ್ಜಾದರು.