ಕಿರುತೆರೆಯೋ?? ಕಿರಿ ಕಿರಿಕಿರಿಯೋ ??!!! - ೧
ಕಿರುತೆರೆ ಈಗ ಜನ ಜೀವನದ ಒಂದು ಭಾಗ. ಅದರಲ್ಲೂ ಈ ದೈನಂದಿನ ಧಾರಾವಾಹಿಗಳು ಬಹುತೇಕ ಜನರ (ಮುಖ್ಯವಾಗಿ ಮಹಿಳೆಯರ) ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಅವರ ದಿನನಿತ್ಯದ ದಿನಚರಿಯೂ ಇದರೊಂದಿಗೆ ಬೆರೆತು ಹೋಗಿರುತ್ತದೆ. ನನಗೆ ನೆನಪಿರುವ ಹಾಗೆ ನನ್ನ ಶಾಲಾ ದಿನಗಳಲ್ಲಿ ಸ್ಕೂಲ್ನಿಂದ ಬಂದ ತಕ್ಷಣ ಮಾಯಾಮೃಗ ಪ್ರಸಾರವಾಗುತ್ತಿತ್ತು. ಅದನ್ನು ನೋಡುತ್ತಲೇ ಕಾಫಿ ತಿಂಡಿ ಆಗಬೇಕು. ಆ ಕಾಲಕ್ಕೆ ನನಗೆ ನೆನಪಿದ್ದಂತೆ ಮಧ್ಯಾಹ್ನ ಮನೆತನ, ಜನನಿ ಧಾರಾವಾಹಿಗಳು ಮೊಟ್ಟ ಮೊದಲ ದೈನಂದಿನ ಧಾರಾವಾಹಿಗಳು; ಮತ್ತೆಲ್ಲವೂ ಸಾಪ್ತಾಹಿಕ. ಆವಾಗ ಚಂದನದ ಜೊತೆಗೆ (ಆವಾಗ ಡಿ.ಡಿ. ೧) ಉದಯ ವಾಹಿನಿ ಬಿಟ್ಟು ಬೇರೆ ಯಾವ ಖಾಸಗಿ ಪ್ರಾದೇಶಿಕ ವಾಹಿನಿಯೂ ಇದ್ದದ್ದು ನನಗೆ ನೆನಪಿಲ್ಲ. ಈ ಶತಮಾನದ ಆರಂಭದಲ್ಲಿ ಈ ಟಿ.ವಿ. ಶುರುವಾಗಿದ್ದು. ನಾನೇನು ಹೇಳುತ್ತಿದ್ದೆ ಎಂದರೆ ದಿನನಿತ್ಯದ ಕೆಲಸಗಳು ಈ ಧಾರಾವಾಹಿಗಳ ಜೊತೆ ಬೆರೆತಿದ್ದವು ಎಂದು. ಮಾಯಾಮೃಗ ನೋಡುತ್ತಾ ಕಾಫಿ ತಿಂಡಿ, ನಂತರವೇ ಆಟಕ್ಕೆ ಹೋಗುತ್ತಿದ್ದದ್ದು. ನಾನು ಪ್ರೈಮರಿ ಸ್ಕೂಲ್ ನಲ್ಲಿ ಇದ್ದಾಗ ದೂರದರ್ಶನ ವಾಹಿನಿಯಲ್ಲಿ ಚಿಗುರು, ಒಂದೇ ಸುಳ್ಳು ಸಾಪ್ತಾಹಿಕ ಧಾರಾವಾಹಿಗಳನ್ನು ನೋಡುತ್ತಿದ್ದೆ. ಹೋಂ ವರ್ಕ್ ಮಾಡುತ್ತಾ, ಡ್ರಾಯಿಂಗ್ ಮಾಡುತ್ತಾ, ಹೀಗೆ ಪ್ರತಿಯೊಂದು ಚಟುವಟಿಕೆಯೊಂದಿಗೆ ಒಂದೊಂದು ಧಾರಾವಾಹಿ ಟೈಮ್ ಟೇಬಲ್ ನಂತೆ ಇತ್ತು ನನಗೆ. ನಾನು ಇದರಿಂದ ಕಲಿತದ್ದೂ ಇದೆ. ಕನ್ನಡ ಸ್ಫುಟವಾಗಿ ಮಾತಾಡುವ ಕಲಾವಿದರಿದ್ದರು. ಬಹಳ ಸೊಗಸಾಗಿ ವಿಷಯ ನಿರೂಪಣೆ ಇರುತ್ತಿತ್ತು. ಅರ್ಥಪೂರ್ಣ ಶೀರ್ಷಿಕೆ ಗೀತೆಗಳು ಇದ್ದವು. ಮನ್ವಂತರ, ಗೃಹಭಂಗ, ದಂಡಪಿಂಡಗಳು, ಪಾ.ಪ.ಪಾಂಡು, ಸಿಲ್ಲಿಲಲ್ಲಿ, ಮೂಡಲ ಮನೆ, ಮುಕ್ತ, ಗರ್ವ, ಪ್ರೀತಿ ಇಲ್ಲದ ಮೇಲೆ, ಮಿಂಚು, ಮಂಥನ ಧಾರಾವಾಹಿಗಳ ವರೆಗೂ ನನ್ನ ದಿನಚರಿ ಈ ಸೀರಿಯಲ್ ಗಳೊಂದಿಗೆ ಬೆರೆತು ಹೋಗಿತ್ತು.
ಆಮೇಲೆ ಕನ್ನಡ ಕಿರುತೆರೆಯ ವಾಹಿನಿಗಳು ನಾಯಿಕೊಡೆಯಂತೆ ಪ್ರಾರಂಭವಾದವು. ಸುಪ್ರಭಾತ ಅಂತ ಒಂದು ವಾಹಿನಿ ಹುಟ್ಟಿ ಅಷ್ಟೇ ಬೇಗ ಸತ್ತು ಹೋಯಿತು. ಕಾವೇರಿ ಅಂತ ಒಂದು ವಾಹಿನಿ ಇತ್ತು, ಅದೂ ನಿಂತು ಹೋಯ್ತು. ೨೦೦೬-೦೭ರ ಹೊತ್ತಿಗೆ ಜೀ ವಾಹಿನಿ ಆರಂಭವಾಯ್ತು. ಸುವರ್ಣ ವಾಹಿನಿ ಉದಯವಾಯ್ತು. ಹಾಗೆಯೇ ನಿಧಾನವಾಗಿ ಕನ್ನಡ ಧಾರಾವಾಹಿಗಳ ಗುಣಮಟ್ಟ ಕ್ರಮೇಣ ಕಡಿಮೆಯಾಯ್ತು. ರಿಯಾಲಿಟಿ ಷೋಗಳ ಅಬ್ಬರ ಹೆಚ್ಚಾಯ್ತು. ಆರಂಭದಲ್ಲಿ ಅವೂ ಚೆನ್ನಾಗಿ ಮೂಡಿಬರುತ್ತಿದ್ದವು. ಈ ಟಿ.ಆರ್.ಪಿಯ ಭೂತ ಹಿಡಿದ ಮೇಲೆ ಮೌಲ್ಯಗಳೆಲ್ಲ ಮೂಲೆಗುಂಪಾದವು. ಇದೆಲ್ಲ ಆರ್ಭಟಗಳ ನಡುವೆ ನ್ಯೂಸ್ ಚಾನೆಲ್ಲುಗಳ ಮಹಾಪರ್ವವವೇ ಆರಂಭವಾಗಿತ್ತು. ಚಂದನ ವಾಹಿನಿಯು ಕೃಷಿ ಮತ್ತು ಥಟ್ ಅಂತ ಹೇಳಿ ಕಾರ್ಯಕ್ರಮಗಳಿಗೆ ಸೀಮಿತವಾಯ್ತು.
ಈವಾಗ ಗಮನಿಸಿ, ಎತ್ತ ಸಾಗುತ್ತಿದೆ ಕನ್ನಡ ಕಿರುತೆರೆಯ ಸೀರಿಯಲ್ಲುಗಳ ಗುಣಮಟ್ಟ? ಕಥೆಯೇ ಇಲ್ಲ. ಸಂಭಾಷಣೆಗಳಂತೂ ಏನೇನೋ ಇರುತ್ತವೆ. ಶೀರ್ಷಿಕೆ ಗೀತೆಗಳ ಪ್ರಸಾರ ನಿಂತು ಹೋಗಿ ತುಂಬಾ ಸಮಯ ಆಯ್ತು. ಅದೇಕೋ ಗೊತ್ತಿಲ್ಲ. ಪಾತ್ರಗಳ ಪ್ರಾಮುಖ್ಯತೆ, ಮೌಲ್ಯ ಒಂದೂ ಯಾರಿಗೂ ಗೊತ್ತೇ ಇಲ್ಲ. ಮನಬಂದಂತೆ ಪಾತ್ರಗಳ ಬದಲಾವಣೆ ಆಗುತ್ತದೆ. ಪಾತ್ರಗಳಿರಲಿ ಕಥೆಯೇ ಎತ್ತೆತ್ತಲೋ ಸಾಗುತ್ತವೆ. ಒಂದು ಕತೆಗೆ ಅಂತ್ಯ ಹಾಡದೇ ಹೊಸ ಶೀರ್ಷಿಕೆಯೊಂದಿಗೆ ಹೊಸ ಪಾತ್ರಗಳು ಹುಟ್ಟುತ್ತವೆ.
ಇದೆಲ್ಲ ಹೇಗೆ ಸಾಧ್ಯ?? ನೀವು ಇಲ್ಲ ಎಂದು ವಾದಿಸುವುದಾದರೆ ನಾನು ಉದಾಹರಣೆ ಸಮೇತ ಹೇಳಬೇಕಾಗುತ್ತದೆ. ಪುಟ್ಟ ಗೌರಿ ಮದುವ ಮುಗಿಯಲೇ ಇಲ್ಲ, ಮಂಗಳ ಗೌರಿ ಬಂದಿದ್ದಾಳೆ. ಅಗ್ನಿಸಾಕ್ಷಿ ಸೀರಿಯಲ್ ನಲ್ಲಿ ಹೀರೋ ವಿಲ್ಲನ್ ಯಾರೂ ಇಲ್ಲ, ಆದರೂ ಸೀರಿಯಲ್ ಮುಗಿಯಲ್ಲ. ಅದೇ ಧಾಟಿಯಲ್ಲಿ ಬಂದಿದ್ದ ರಾಧಾ ರಮಣ ಒಂದೇ ದಿನದಲ್ಲಿ ಮುಗಿಸಿದರು... (ಬಿಗ್ ಬಾಸ್ ಗೆ ಜಾಗ ಕೊಡಲು ಮುಂಚೆಯೂ ಈ ರೀತಿ ಕೆಲವು ಸೀರಿಯಲ್ಲುಗಳನ್ನು ಸಾಯಿಸಿದ್ದರು). ನಮ್ಮನೆ ಯುವರಾಣಿ ಧಾರಾವಾಹಿಯೂ ಸಹ ಅಗ್ನಿಸಾಕ್ಷಿಯ ಮಾದರಿ ಕಥೆಯನ್ನೇ ಹೊಂದಿದೆ. ಇನ್ನು ಬರುವ ಅನೇಕ ಧಾರಾವಾಹಿಗಳು ರೀಮೇಕುಗಳು. ಯಾವುದೋ ರಾಜ್ಯದಲ್ಲಿ ಅಲ್ಲಿನ ಸಂಸ್ಕೃತಿಗೆ ಹೊಂದುವಂತೆ ಗೆದ್ದಂತವು. (ಇವಳು ಸುಜಾತ, ಜೊತೆ ಜೊತೆಯಲಿ, ಗಟ್ಟಿಮೇಳ, ಯಾರೇ ನೀ ಮೋಹಿನಿ, ನಂದಿನಿ ಇನ್ನೂ ಹಲವು).
ಎಲ್ಲರನ್ನೂ ನಾನು ಇಲ್ಲಿ ಅಲ್ಲಗೆಳೆಯುತ್ತಿಲ್ಲ, ಕೆಲವರು ಕಥೆಗೆ, ಅಭಿರುಚಿಗೆ ಪ್ರಾಮುಖ್ಯತೆ ಕೊಟ್ಟು ಧಾರಾವಾಹಿ ಮಾಡುತ್ತಿದ್ದಾರೆ(ಮಗಳು ಜಾನಕಿ, ಪಾ.ಪ. ಪಾಂಡು-೨, ಸಿಲ್ಲಿ ಲಲ್ಲಿಯೂ ಪರವಾಗಿಲ್ಲ, ಆದ್ರೂ ಹಳೇದೆ ಬೆಸ್ಟ್ ). ಆದರೆ ಮುಖ್ಯವಾಗಿ ಹೇಳಹೊರಟಿರುವುದು ಸಂಸ್ಕೃತಿಯ ರಾಯಭಾರಿಗಳಂತಿರಬೇಕಾದ ಧಾರಾವಾಹಿಗಳು ಅದನ್ನು ಅಳಿಸ ಹಾಕಹೊರಟಿರುವುದು ತಪ್ಪು. ಸಾಮಾನ್ಯವಾಗಿ ಈ ಧಾರಾವಾಹಿಗಳ ಸಿದ್ಧ ಸೂತ್ರವೆಂದರೆ ಲೇಡಿ ವಿಲ್ಲನ್ ಗಳು, ಹಾಗೂ ಅನೈತಿಕ ಸಂಬಂಧಗಳು. ಇವರು ಯಾವಾಗಲೂ ವಿಷದ ಬಾಟಲಿಯನ್ನು ಸೊಂಟದಲ್ಲಿ ಸಿಕ್ಕಿಸಿಕೊಂಡಿರುತ್ತಾರೆ. ಮನೆಯಲ್ಲಿ ಹಬ್ಬವೋ / ಸಮಾರಂಭಗಳೋ ಇದ್ದಾಗ ಊಟದಲ್ಲಿ ಬೆರೆಸುತ್ತಾರೆ. ಇದು ನಮ್ಮ ಸಂಸ್ಕೃತಿಯೇ??? ಒಬ್ಬರ ಕಥೆಯಲ್ಲ ಎಲ್ಲರದ್ದೂ ಇದೇ ಕತೆ. ಊಟದಲ್ಲಿ ವಿಷ ಹಾಕಲು ಸಾಧ್ಯವಾಗದಿದ್ದರೆ ಇನ್ನೂ ಮುಂದೆ ಹೋಗಿ ಸುಪಾರಿ ಕೊಡುತ್ತಾರೆ. ಕತೆ ಮುಗಿದು ಹೋದರೂ ಟಿ.ಆರ್.ಪಿ ಬರುತ್ತಿದೆ ಎಂದು ಸುಮ್ಮನೆ ಮುಂದುವರೆಸುತ್ತಾರೆ. ಒಂದೊಂದು ಸಾರಿ ನಮ್ಮ ಜನರ ಅಭಿರುಚಿಯ ಬಗ್ಗೆಯೇ ಬೇಸರ ಮೂಡುತ್ತದೆ. ಇಂಥ ಕೆಟ್ಟ ಅಭಿರುಚಿಯ ಧಾರಾವಾಹಿಗಳನ್ನು ಏಕೆ ಗೆಲ್ಲಿಸುತ್ತಾರೋ ಗೊತ್ತಿಲ್ಲ. ಇನ್ನಾದರೂ ಗುಣಮಟ್ಟದ ಧಾರಾವಾಹಿಗ ರಚನೆಯಾಗಲಿ ಎಂದು ಆಶಿಸುತ್ತಾ......
signing off
ರಿಯಾಲಿಟಿ ಷೋ ಅಬ್ಬರ ಹಾಗೂ ನ್ಯೂಸ್ ಚಾನೆಲ್ ಹಾವಳಿಗಳ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ.





ಬ್ಲಾಗ್ ಬರಹಗಾರರ ಪ್ರಪಂಚಕ್ಕೆ ಸ್ವಾಗತ. ನಿನ್ನ ಅಭಿವ್ಯಕ್ತಿ ಪ್ರತಿಭೆಗೆ ತಕ್ಕುದಾದ ಮಾಧ್ಯಮವನ್ನು ಆರಿಸಿಕೊಂಡಿದ್ದೀಯಾ. ಅಭಿನಂದನಗಳು.
ReplyDeleteಕನ್ನಡ ಧಾರಾವಾಹಿಗಳ ಬಗ್ಗೆ ನನ್ನ ಅಭಿಪ್ರಾಯವು ಅದೇ ಆಗಿದೆ. ಮುಖ್ಯವಾಗಿ ಕಂತುಗಳ ಎಳೆದಾಟ ಬೇಸರ ತರಿಸುತ್ತೆ. ನೀನು ಜನಿಸುವುದಕ್ಕೂ ಮುಂಚೆ, ಅಂದರೆ ೧೯೮೪ರ ಸಮಯಕ್ಕೆ ದೂರದರ್ಶನವೊಂದೇ ಇತ್ತು. ಆಗ್ ಹಮ್ ಲೋಗ್ , ಬುನೀಯಾದ್ ಗಳಂಥ ಧಾರಾವಾಹಿಗಳು ಜನರನ್ನು ತುಂಬಾ ಆಕರ್ಷಿಸಿದ್ದವು. ಅವುಗಳ ಗುಣಮಟ್ಟವೂ ಉತ್ತಮವಾಗಿರುತ್ತಿತು. ಆನಂತರದ ದಿನಗಳಲ್ಲಿ ರಾಮಾಯಣ, ಮಹಾಭಾರತ ಧಾರಾವಾಹಿಗಳು ಮನೆಮಾತಾಗಿಬಿಟ್ಟಿದವು. ಅಂದಿನ ದಿನಗಳ ೧೩ ಕಂತುಗಳ ಕಿರು ಧಾರಾವಾಹಿಗಳು ಚೆನ್ನಾಗಿರುತಿದ್ದವು.
ಆನಂತರ ನೀನು ಬೆಳೆಯುವ ಹೊತ್ತಿಗೆ ಪ್ರಾಂತೀಯ ಕೇಂದ್ರಗಳು ಸ್ಥಾಪಿತವಾದವು. ನೀನು ಬರೆದಿರುವ ಎಲ್ಲ ಧಾರಾವಾಹಿಗಳು ಆ ಕಾಲದವು.
ಮತ್ತೊಂದು ವಿಷಯ. ಪ್ರತಿ ತಲೆಮಾರಿನವರು ತಮ್ಮ ಬಾಲ್ಯದಲ್ಲಿ ಗುಣಮಟ್ಟ ಉತ್ತಮವಾಗಿತ್ತು ಎಂದು ಉದ್ಗರಿಸುವುದು ಸರ್ವೆಸಾಮಾನ್ಯ. ಹಾಗಂದ ಮಾತ್ರಕ್ಕೆ ಇಂದಿನದೆಲ್ಲ ವರ್ಜ್ಯ ಎಂದು ಹೇಳಲಾಗದು. ಈಗ ನೋಡು, ಮೂಕಜ್ಜಿಯ ಕನಸುಗಳು ಎಂಬ ಚಿತ್ರ ಚೆನ್ನಾಗಿದೆ ಎಂಬ ಅಭಿಪ್ರಾಯ ಬಂದಿದೆ. ಬಾಹುಬಲಿಯಂತ ತಾಂತ್ರಿಕ ಗುಣಮಟ್ಟದ ಸಿನಿಮಾಗಳು ನಮ್ಮ ಕಾಲದಲ್ಲಿ ಇತ್ತಿಲ್ಲ. ಮತ್ತೆ ಜನಗಳ ಹಾಗು ಜನಜೀವನದ ಅಭಿರುಚಿಗೆ ತಕ್ಕಂತೆ ಸಿನಿಮಾ-ಸೀರಿಯಲ್ಗಳು ಬದಲಾಗಬೇಕಿರುತ್ತೆ.
ಕಡೆಯದಾಗಿ ಬ್ಲಾಗ್ ಬರಹಗಾರರಿಗೆ ತಾಳ್ಮೆ ಇರಬೇಕು ಮತ್ತು ಜನಮನ್ನಣೆಯ ನೀರಿಕ್ಷೆ ಹೆಚ್ಚಿರಬಾರದು. ಶುರುವಿನಲ್ಲಿ ಕೆಲವರು ಪ್ರತಿಕ್ರಿಯಿಸುತ್ತಾರೆ. ಕ್ರಮೇಣ ಅವರುಗಳ ಸಂಖ್ಯೆ ಕ್ಷೀಣಿಸುತ್ತೆ. ಇವಳ್ಯಾವ ಸೀಮೆಯ ಬರಹಗಾರ್ತಿ ಎಂಬ ತಾತ್ಸಾರದ ಭಾವವೂ ಗೋಚಿರುಸುತ್ತೆ. ಹವ್ಯಾಸ ಮುಂದುವರಿಸಲು ಆತ್ಮಸಂತೋಷದ ತುಡಿತವಿರಬೇಕು. ಬರೆಯುತ್ತ ಮುಂದೆ ಸಾಗು. ನಿನ್ನ ಮುಂದಿನ ಪೀಳಿಗೆಗೆ ಮಾದರಿಯಾಗು.
ಶುಭವಾಗಲಿ.
ನಿನ್ನ ದೊಡ್ಡಪ್ಪ
ಲಕ್ಷ್ಮೀನಾರಾಯಣ
ನಿಮ್ಮ ಅಮೂಲ್ಯವಾದ ಅನಿಸಿಕೆ ಹಾಗೂ ಸಲಹೆಗೆ ಅನಂತ ಧನ್ಯವಾದಗಳು ದೊಡ್ಡಪ್ಪ��
ReplyDeleteWish you luck 😊
ReplyDeleteThank you so much
DeleteMay I know your name please