Tuesday, May 30, 2023

ಕಪಿಕುಲೇಶ ಹನುಮ ವರದ ರಾಮಚಂದ್ರನಾ - Rama Bhajane

 


ಕಪಿಕುಲೇಶ ಹನುಮ ವರದ ರಾಮಚಂದ್ರನಾ 

ವಿಪುಲ ನಾಮವನ್ನು ಬಿಡದೆ ಜಪಿಸೋ ಮಾನವ ।। ಕಪಿಕುಲೇಶ ।।


ಬಾಲ್ಯದಲ್ಲಿ ಕೌಶಿಕ ಋಷಿಯ ಕ್ರತುವ ಸಲಹಿದ 

ಫಾಲನೇತ್ರ ಹರನ ಧನುವ ಮುರಿದು ಕೆಡುಹಿದ 

ಶೂರತನದಿ ಸೀತೆಯನು ಮದುವೆಯಾಗುತ 

ಧೀರ ಪರಶುರಾಮರನು ಭಂಗಗೊಳಿಸಿದ ।। ಕಪಿಕುಲೇಶ ।।


ಪಿತನ ನೇಮದಿಂದ ಹಿತದಿ ವನಕೆ ತೆರಳಿದ 

ಸತತ ದುಷ್ಟ ದನುಜರನು ಬಿಡದೆ ಸೀಳಿದ 

ಸೂರ್ಯ ಸುತಗೆ ಪಟ್ಟಕಟ್ಟಿ ಪರಮನೆನಿಸಿದ 

ಧೈರ್ಯ ಮುದ್ರಿಕೆ ಕಳುಹಿ ತನ್ನ ವಾರ್ತೆ ತಿಳುಹಿದ ।। ಕಪಿಕುಲೇಶ ।।


ಶರಧಿಗಿರದಿ ಸೇತುವೆಯ ಭರದಿ ಕಟ್ಟಿದ 

ದುರುಳ ರಾವಣನ ಕೊಂದು ಧರೆಯ ಸಲಹಿದ 

ತರುಣಿಯೊಡನೆ ಕೂಡಿ ತನ್ನ ಪುರಕೆ ತೆರಳಿದ 

ಭರತನನು ಪೊರೆದ ಬಳಿಕ ರಾಜ್ಯವಾಳಿದ ।। ಕಪಿಕುಲೇಶ ।।

 

ಪರಮ ವಿಭವದಿಂದ ಸಿಂಹ ಪೀಠವೇರುತ 

ಶರಣು ಜನರ ಬಿಡದೆ ಕಾಯ್ವ ಪರಮ ಪುರುಷನ 

ವಿಪುಲ ನಾಮವನ್ನು ಬಿಡದೆ ಜಪಿಸೋ ಮಾನವ 

ವಿಪುಲ ನಾಮವನ್ನು ಬಿಡದೆ ಜಪಿಸೋ ಮಾನವ 


No comments:

Post a Comment