Wednesday, March 17, 2021

ವಿಶ್ವಧರ್ಮವಾಗುವಲ್ಲಿ ಹಿಂದೂ ಧರ್ಮಕ್ಕಿರುವ ಸಾಧ್ಯತೆಗಳು - ವಿವೇಕಾನಂದರ ಚಿಂತನೆ

ಪ್ರಸ್ತಾವನೆ:

    ಧರ್ಮ ಎಂದರೇನು ? ಇದೊಂದು  ಅತ್ಯಂತ ಸಂಕೀರ್ಣ ಪ್ರಶ್ನೆ. ಸುಲಭವಾಗಿ ಅರ್ಥೈಸಲು ಸಾಧ್ಯವಾಗದು. ಎಲ್ಲವನ್ನು ಧರಿಸುವಂತದ್ದು, ಎಲ್ಲದಕ್ಕೂ ಆಧಾರವಾಗಿರುವಂಥದ್ದನ್ನು ಧರ್ಮ ಎನ್ನಬಹುದು. ಇದೊಂದು ವಿಶ್ವವ್ಯಾಪಿ  ವ್ಯವಸ್ಥೆ, ಮೂಲಾಧಾರ. ಮಾನವ ವಿವೇಚನಾ ಶಕ್ತಿಯುಳ್ಳ  ಸಾಮಾಜಿಕ ಪ್ರಾಣಿ; ತಾನು ಶಾಂತಿ,  ನೆಮ್ಮದಿ, ಸುವ್ಯವಸ್ಥೆಯಿಂದ ಬಾಳ್ವೆ ನಡೆಸಲು  ಹಾಕಿಕೊಂಡ ತರ್ಕಬದ್ಧವಾದ ನೈತಿಕ ನೆಲೆಗಟ್ಟೇ ಧರ್ಮ ಎನ್ನಬಹುದು. 

ನಮ್ಮ ದೇಶ ಭಾರತದ ಪ್ರಧಾನವಾದ ಧರ್ಮ ಹಿಂದೂ ಧರ್ಮ. ಇದುವೇ ವಿಶ್ವದ ಅತ್ಯಂತ ಪುರಾತನವಾದ, ಸನಾತನವಾದ ಧರ್ಮ. ಇದು ಅನೇಕ ದೃಷ್ಟಿಕೋನಗಳ ವೈಶಿಷ್ಟ್ಯಕ್ಕೆ , ವಿವಿಧತೆಯಲ್ಲಿ  ಏಕತೆಗೆ ಸ್ಥಳ ಮಾಡಿಕೊಟ್ಟಿರುವ ಧರ್ಮ.  ಇಂತಹ ಹಿಂದೂ ಧರ್ಮದ ಹೆಮ್ಮೆಯ ಪ್ರತಿನಿಧಿ ವೀರಸನ್ಯಾಸಿ ವಿವೇಕಾನಂದರು.  ಭಾರತ ಕಂಡ ಈ ಯುವ ಪುರುಷ ಸಿಂಹ ಹಿಂದೂ ಧರ್ಮವನ್ನು ಪ್ರತಿನಿಧಿಸುತ್ತಾ ನಮ್ಮ ದೇಶಕ್ಕೆ ಹೆಮ್ಮೆ ತಂದ ಕೀರ್ತಿಪುರುಷ. ಅವರ ಆಲೋಚನೆಗಳು, ಚಿಂತನೆಗಳು, ಇಂದಿಗೂ ನಮ್ಮ ಯುವ ಜನಾಂಗಕ್ಕೆ ಆದರ್ಶಪ್ರಾಯವಾಗಿವೆ. ಯಾವುದೇ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಯುವಜನತೆಯ ಶಕ್ತಿಯೇ ಪ್ರಮುಖವಾದುದು ಎಂಬುದು ಸರ್ವರಿಗೂ ತಿಳಿದಿರುವ ವಿಚಾರ. "ಏಳಿ , ಎದ್ದೇಳಿ,  ಗುರಿ ಮುಟ್ಟುವವರೆಗೂ ನಿಲ್ಲದಿರಿ!!" ಎಂಬ ಅವರ ವಿದ್ಯುತ್ ವಾಣಿಯಿಂದಲೇ ನಮ್ಮಂತಹ ಅನೇಕ ಯುವಕರು, ವಿದ್ಯಾರ್ಥಿಗಳು ಸ್ಫೂರ್ತಿ ಪಡೆದಿದ್ದೇವೆ. ಆದ್ದರಿಂದಲೇ ಅವರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಿ, ಅವರ ಚಿಂತನೆಗಳನ್ನು, ವಿಚಾರಧಾರೆಗಳನ್ನು ಸ್ಮರಿಸಿ ಗೌರವಿಸುತ್ತೇವೆ. ಅಷ್ಟೇ ಆದರೆ  ಸಾಕೇ ?  ಅವರ ಆಲೋಚನೆಗಳನ್ನು, ಚಿಂತನೆಗಳನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿ ನಮ್ಮ ಯುವ ಜನಾಂಗಕ್ಕೆ ಇದೆಯಲ್ಲವೇ? ಆಗಷ್ಟೇ ತಾನೇ, ಗುರಿಸಾಧನೆಯಾಗುವುದು… ?!!

ಈಗ ನಮ್ಮ ಸನಾತನ  ಹಿಂದೂ ಧರ್ಮ  ವಿಶ್ವಧರ್ಮವಾಗುವಲ್ಲಿ,ವಿವೇಕಾನಂದರ ಚಿಂತನೆಗಳು  ಏನೇನಿತ್ತು ...?
ತಿಳಿಯೋಣ ಬನ್ನಿ… 






 ವಿಷಯ ಮಂಡನೆ :

    ೧೮೯೩ರ ಸೆಪ್ಟೆಂಬರ್ ೧೧ ರಿಂದ ೨೭ನೆೇ ತಾರೀಖಿನ ವರೆಗೆ ಅಮೆರಿಕೆಯ ಷಿಕಾಗೊ ನಗರದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ನಮ್ಮ ಸ್ವಾಮೀ ವಿವೇಕಾನಂದರು,  ದೇಶದಿಂದ, ಹಿಂದೂ ಧರ್ಮದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದರು. ಇದು ವಿಶ್ವದ ಪ್ರಥಮ ಧರ್ಮ  ಸಮ್ಮೇಳನವಾಗಿದ್ದು, ಜಗತ್ತಿನಾದ್ಯಂತ ಪ್ರತಿನಿಧಿಗಳು, ಇಲ್ಲಿ ಭಾಗವಹಿಸಿದ್ದರು. 

    ೧೧ನೆೇ ಸೆಪ್ಟೆಂಬರ್ , ಸ್ವಾಮಿ ವಿವೇಕಾನಂದರು,  ತಮ್ಮ ಪ್ರಥಮ ಉಪನ್ಯಾಸವನ್ನು ಪ್ರಸ್ತುತ ಪಡಿಸಿದರು. ಅಲ್ಲಿ ಮೊದಲನೆಯದಾಗಿ ಅವರು ನೆರೆದಿದ್ದ ಜನಸ್ತೋಮವನ್ನು ಸಂಬೋಧಿಸಿದ್ದು, "Sisters and Brothers of America " ಎಂದು. ಈ ರೀತಿಯಾದ ಸಂಬೋಧನೆಯನ್ನು ಕೇಳಿ ರೋಮಾಂಚಿತರಾದ ಸಭಾ ಸದಸ್ಯರು, ಎದ್ದು ನಿಂತು ೨ ನಿಮಿಷಗಳ  ಕಿವಿಗಡಚಿಕ್ಕುವ ಕರತಾಡನ ಮಾಡಿ ಸ್ವಾಗತಿಸಿದರು. ಇಲ್ಲಿದೆ ನೋಡಿ ಹಿಂದೂ ಧರ್ಮದ ತಾಕತ್ತು!!  ಅಂದಿನ ಪ್ರಾಸ್ತಾವಿಕ ಭಾಷಣದಲ್ಲಿಯೇ, ಹಿಂದೂ ಧರ್ಮದ ಬಗೆಗಿನ ಸಕಲವನ್ನೂ ಎರಡೇ ಸಾಲಿನಲ್ಲಿ ಹೇಳಿ ಮುಗಿಸಿದ್ದರು.ಜನ ಮಾನಸವನ್ನು ಸೂರೆಗೊಂಡಿದ್ದರು.  "ಜಗತ್ತಿಗೆ  ಸಹನೆ, ಸಹಿಷ್ಣುತೆಯನ್ನು, ಸಾರ್ವಕಾಲಿಕ ಸ್ವೀಕೃತಿಯನ್ನೂ ಪ್ರಚುರಪಡಿಸಿರುವ ಹಿಂದೂ ಧರ್ಮದ ಪ್ರತಿನಿಧಿಯಾಗಿ, ಭಾರತದಿಂದ ಬಂದಿರುವ  ನಾನು ನಿಮ್ಮೆಲ್ಲರಿಗೂ ಅಭಿವಂದಿಸುತ್ತೇನೆ" ಎಂದಿದ್ದರು ವಿವೇಕಾನಂದರು. 

ಈ ಎರಡು ಸಾಲುಗಳೇ   ಸಾಕು, ಹಿಂದೂ ಧರ್ಮದ ಸಾರ್ವಭೌಮತೆಯನ್ನು ಸಾರಲು. ಮನುಸ್ಮೃತಿಯಲ್ಲಿ  ಹೇಳಿರುವಂತೆ,

धृति: क्षमा दमोऽस्‍तेयं शौचमिन्‍द्रियनिग्रह:।
धीर्विद्या सत्‍यमक्रोधो दशकं धर्मलक्षणम्‌।। "   (मनुस्‍मृति ६.९२)

ಧರ್ಮದ ೧೦ ಗುಣವಿಶೇಷಗಳು ಇಂತಿವೆ: 

 ಧೈರ್ಯ, ಕ್ಷಮೆ, ಆತ್ಮಸಂಯಮ, ಕಳ್ಳತನ ಮಾಡದಿರುವಿಕೆ,  ಆಂತರ್ಯದ ಪಾವಿತ್ರ್ಯತೆ, ಇಂದ್ರಿಯ ನಿಗ್ರಹ, ಪ್ರಜ್ಞೆ, ಜ್ಞಾನ, ಸತ್ಯ ಹಾಗು ಶಾಂತಿ. 

ವಿವೇಕಾನಂದರು ಹೇಳಿದಂತೆ, ಇಂತಹ ಗುಣವಿಶೇಷಗಳುಳ್ಳ ಹಿಂದೂ ಧರ್ಮವೇ ಜಗತ್ತಿಗೆ ತಾಳ್ಮೆ ಹಾಗೂ ಸ್ವೀಕಾರವನ್ನು ಕಲಿಸಿರುವುದು. 

೧೫ ಸೆಪ್ಟೆಂಬರ್ ನಂದು ವಿವೇಕಾನಂದರು, ತಮ್ಮ ಭಾಷಣದಲ್ಲಿ "ಕೂಪಮಂಡೂಕ"ದ  ಕಥೆಯ ನಿರೂಪಣೆ ಮಾಡುತ್ತಾರೆ. ಇದು ಜನಾನಾರಭ್ಯದಿಂದ, ಬಾವಿಯೊಳಗಡೆಯೇ ಇದ್ದು, ಬೇರೆ ಯಾವ ಬಾಹ್ಯ ಸಂಪರ್ಕವೂ, ಪ್ರಾಪಂಚಿಕ ಜ್ಞಾನವೂ ಇರದ, ತನ್ನ ಬಾವಿಯೇ ಶ್ರೇಷ್ಠ ಎಂದು ಬಾವಿಯೊಳಗಿನ ಮೂರ್ಖ ಕಪ್ಪೆಯ ಕತೆ. ಸಹಿಷ್ಣುತೆ, ಸ್ವೀಕಾರ ಮನೋಭಾವಗಳಿಲ್ಲದಿದ್ದರೆ, ಯಾವ ಧರ್ಮೀಯನಾದರೂ, ಬಾವಿಯೊಳಗಿನ ಕಪ್ಪೆಯಂತಾಗುತ್ತಾನೆ. 

೧೯ನೆೇ  ಸೆಪ್ಟೆಂಬರ್ , ತಮ್ಮ ಮೂರನೆಯ ಭಾಷಣದಲ್ಲಿ ವಿವೇಕಾನಂದರು, ಹಿಂದೂ ಧರ್ಮದ ಬಗೆಗಿನ ತಮ್ಮ  ಪ್ರಸ್ತುತ  ಪಡಿಸುತ್ತಾರೆ.  ಇಲ್ಲಿ ಅವರು, ವೇದಾಂತದ ಬಗೆಗೆ ಪ್ರಸ್ತಾಪಿಸುತ್ತಾ, ಹಿಂದೂ ಧರ್ಮವು, ವೈಜ್ಞಾನಿಕ ತಳಹದಿಯಲ್ಲಿಯೇ ವಿಕಾಸನಗೊಂಡು, ತನ್ನ ಬೆಳಕನ್ನು ಹೊರಚೆಲ್ಲುವ ಏಕೈಕ ಧರ್ಮವಾಗಿದೆ ಎಂದು ಹೇಳುತ್ತಾರೆ. ವಿಜ್ಞಾನದ ಮೂಲ ಉದ್ದೇಶ, ಏಕತನವವನ್ನು ಅನ್ವೇಷಿಸುವುದು. ಹಿಂದೂ ಧರ್ಮದ ವೇದಾಂತ ತತ್ವವೂ ಸಹ, ಎಂದಿಗೂ ಬದಲಾಗದ ಅಚಲ ಸತ್ಯದ ದರ್ಶನ, ಅಥವಾ ಆತ್ಮ ಸಾಕ್ಷಾತ್ಕಾರವನ್ನೇ ಪ್ರತಿಪಾದಿಸುತ್ತದೆ. 

ವಿವೇಕರ ಇದೇ  ಅಭಿಪ್ರಾಯದ ಆಧಾರದ ಮೇಲೆ, ನಾವು ಎಲ್ಲ ಧರ್ಮದವರೂ ಒಪ್ಪಬಹುದಾದ ತಾತ್ವಿಕ ನಿಲುವು ಹೊಂದಿರುವ ಹಿಂದೂ ಧರ್ಮವು ವಿಶ್ವಧರ್ಮವಾಗುವ ಎಲ್ಲ ಅರ್ಹತೆಗಳೂ ಹೊಂದಿದೆ ಎಂದು ಪ್ರತಿಪಾದಿಸಬಹುದಾಗಿದೆ. ಹಿಂದೂ ಧರ್ಮದಲ್ಲಿ, ಪ್ರತಿ ವ್ಯಕ್ತಿಯ ವ್ಯಕ್ತಿತ್ವ ಹಾಗೂ ಯೋಗ್ಯತಾನುಸಾರವಾಗಿ ಆತ್ಮೋದ್ಧಾರದ ಮಾರ್ಗಗಳನ್ನು ತಿಳಿಯಪಡಿಸಿದೆ. ಅದು ಕರ್ಮಮಾರ್ಗವಾಗಿರಬಹುದು, ಭಕ್ತಿಮಾರ್ಗವಾಗಿರಬಹುದು, ಜ್ಞಾನಮಾರ್ಗವಾಗಿರಬಹುದು, ಅಥವಾ ಯೋಗಮಾರ್ಗವಾಗಿರಬಹುದು (ರಾಜಯೋಗ). ಹಿಂದೂ ಧರ್ಮದಲ್ಲಿರುವ ಈ ನಮ್ಯತೆ ಬೇರೆ ಯಾವ ಧರ್ಮದಲ್ಲಿಯೂ  ನಮಗೆ ಕಾಣಸಿಗುವುದಿಲ್ಲ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಬೋಧಿಸಿರುವುದೂ ಇದನ್ನೇ... 

ತಮ್ಮ ಮುಂದಿನ ಭಾಷಣದಲ್ಲಿ, ಅಂದರೆ, ೨೦ ಸೆಪ್ಟೆಂಬರ್ ನಂದು, ವಿವೇಕರು, ಕ್ರೈಸ್ತ ಮಿಷನರಿಗಳನ್ನು ಖಂಡಿಸಿ ಅವರ ನೆಲದಲ್ಲಿಯೇ ತಿಳಿ ಹೇಳುತ್ತಾರೆ.. ! "ಓ ಪಾಪಿಗಳೆ  ನಿಮ್ಮನ್ನು ನಾವು ಉಳಿಸುತ್ತೇವೆ , ನಮ್ಮ ಧರ್ಮವನ್ನು ಒಪ್ಪಿಕೊಳ್ಳಿ … " ಎಂದು ಪ್ರತಿಪಾದನೆ ಮಾಡುವುದು ಎಷ್ಟು  ಸರಿ ಎಂದು ಪ್ರಶ್ನಿಸುತ್ತಾರೆ. ಅಲ್ಲದೇ ಹಸಿದವನಿಗೆ ಅನ್ನ ನೀಡುವುದು ಧರ್ಮವೇ ಹೊರತು, ಇಂತಹ ಬಲವಂತದ ಹೇರಿಕೆಗಳಲ್ಲ ಎಂದು ತಮ್ಮ ವಾದ ಮಂಡಿಸುತ್ತಾರೆ. ಇದು ಸಾರ್ವಕಾಲಿಕ ಸತ್ಯವಲ್ಲವೇ …? ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಪ್ರತಿ ತಾಯಿಯೂ  ಸಣ್ಣ ಮಗುವಿನಿಂದಲೂ ಕಲಿಸುವ ಪಾಠ ಇದೇ ಅಲ್ಲವೇ … !
          ದಯೆಯೇ ಧರ್ಮದ ಮೂಲ ಎಂದು.  

೨೬ ನೇಯ ಸೆಪ್ಟೆಂಬರ್ ನಂದು, ಸ್ವಾಮಿ, ಬೌದ್ಧ ಧರ್ಮದ ಕುರಿತು ಪ್ರಸ್ತಾಪಿಸಿದರು. ವಿವೇಕರು ಹೇಳಿದ ಒಂದೇ ಮಾತು ಸಭೆಯನ್ನು ತೀವ್ರ ಆಲೋಚನೆಗೆ ಒಳಪಡುವಂತೆ ಮಾಡಿತ್ತು. ಕ್ರೈಸ್ತ ಧರ್ಮದ ಮೂಲ ಪುರುಷನಾದ ಜೀಸಸ್ ಒಬ್ಬ ಯಹೂದಿ. ಶಾಕ್ಯಮುನಿ ಯಾದ ಗೌತಮ ಬುದ್ಧ ಒಬ್ಬ ಹಿಂದೂ. ಯಹೂದಿಗಳು, ಜೀಸಸ್ಸ್ ನ ಅಭಿಪ್ರಾಯಗಳಿಗೆ, ಬೋಧನೆಗಳಿಗೆ ಮಾನ್ಯತೆ ಕೊಡದೆ, ಅತ್ಯಂತ ಕ್ರೂರವಾಗಿ  ಕಂಡು, ಆತನನ್ನು ಶಿಲುಬೆಗೇರಿಸಿದರು. ಹಿಂದೂಗಳು, ಬುದ್ಧನನ್ನು ಒಪ್ಪಿಕೊಂಡು, ಅವನ ಆಧ್ಯಾತ್ಮಿಕ ಸಾರ್ವಭೌಮತೆಯನ್ನು ಕೊಂಡಾಡಿದರು. ಆದ್ದರಿಂದ, ಬೌದ್ಧಧರ್ಮ ಹಿಂದೂ ಧರ್ಮದ ಒಂದು ಈಡೇರಿದ ಆಕಾಂಕ್ಷೆಯಂತೆ.!!!

೨೭ ಸೆಪ್ಟೆಂಬರ್ ನಂದು, ತಮ್ಮ ಕೊನೆಯ ಉಪನ್ಯಾಸದಲ್ಲಿ, ಸಮ್ಮೇಳನದ ಯಶಸ್ಸಿಗೆ ಕಾರಣರಾದ ಸರ್ವರಿಗೂ  ವಂದಿಸಿ, ಸಹಕಾರ, ಶಾಂತಿ, ನೆಮ್ಮದಿಗಳಿಂದ ಭಿನ್ನಾಭಿಪ್ರಾಯಗಳನ್ನು  ದೂರ ಮಾಡಿಕೊಂಡು,  ಸಾಮರಸ್ಯದಿಂದ ಬಾಳ್ವೆ ನಡೆಸಬೇಕೆಂದು  ಉಪಸಂಹರಿಸಿದರು. 

ಇವಿಷ್ಟು ಸ್ವಾಮಿ ವಿವೇಕಾನಂದರ ಷಿಕಾಗೋ ಸಮ್ಮೇಳನದಲ್ಲಿ ಹಿಂದೂ ಧರ್ಮದ ಸಾರ್ವಭೌಮತೆಯನ್ನು ಕುರಿತಾಗಿ, ಹಿಂದೂ ಧರ್ಮದ ಪ್ರತಿನಿಧಿಯಾಗಿ ತಮ್ಮ ಚಿಂತನೆಗಳನ್ನು ವ್ಯಕ್ತಪಡಿಸಿದ್ದರ  ತಿರುಳು. 

೨೫ ಮಾರ್ಚ್ ೧೮೯೬ರಲ್ಲಿ ವಿವೇಕಾನಂದರು, ಹಾವರ್ಡ್ ಯೂನಿವರ್ಸಿಟಿಯಲ್ಲಿ ವೇದಾಂತ ತತ್ವದ ಬಗ್ಗೆ ಉಪನ್ಯಾಸ ನೀಡಿ,  ಸಭಿಕರ ಜೊತೆ ಪ್ರಶ್ನೋತ್ತರ ಮಾಲಿಕೆಯಲ್ಲಿ ಭಾಗವಹಿಸಿ ಅವರ ಸಂದೇಹಗಳನ್ನು ಪರಿಹರಿಸಿದರು.  
ಆತ್ಮೋದ್ಧಾರದ ಮಾರ್ಗಗಳ ಬಗ್ಗೆ, ಹಾಗೂ ಅದ್ವೈತ, ದ್ವೈತಗಳ  ಬಗೆಗೆ ವಿವರಣೆ ನೀಡಿದ್ದರು. ಹಿಂದೂ ಧರ್ಮದಲ್ಲಿರುವ ನಮ್ಯತೆ ಹಾಗೂ ಸ್ವತಂತ್ರದ  ಬಗೆಗೆ ಸಭಿಕರಿಗೆ ಮನದಟ್ಟು ಮಾಡಿದ್ದರು. ಜಗತ್ತಿನ ಮಾತೃ ಧರ್ಮ ಹಿಂದೂ ಧರ್ಮವೇ ಆಗಿದ್ದು, ಈಗಿರುವ ಎಲ್ಲ ಧರ್ಮಗಳಿಗೂ ಅದರ ಪ್ರಭಾವ ಇದ್ದೇ ಇದೆ ಎನ್ನುವುದನ್ನು ಅರಿಯುವಂತೆ ಮಾಡಿದರು. 
ಹಿಂದೂ ವಿಶ್ವಧರ್ಮವಾಗುವ ಎಲ್ಲ ಸಾಧ್ಯತೆಗಳನ್ನು ಹೊಂದಿರುವುದನ್ನು ನಾವು ಇಲ್ಲಿ ಗಮನಿಸಬಹುದು. 

ಭಗವದ್ಗೀತೆಯ ಸಾರವನ್ನು ವಿವೇಕರು ಎಲ್ಲರಿಗೂ ಬೋಧಿಸುತ್ತಿದ್ದರು. ಹಿಂದೂ ಧರ್ಮದ ಎಲ್ಲಾ ಮೂಲಮಂತ್ರವೂ ಸಹ ಗೀತೆಯಲ್ಲಿಯೇ ಅಡಕವಾಗಿದೆ. 

ಉಪಸಂಹಾರ:
ಹೀಗಿರುವಾಗ ವಿಶ್ವಧರ್ಮವಾಗುವ ಎಲ್ಲಾ ಮಾನ್ಯತೆ, ಅರ್ಹತೆಗಳೂ ಹಿಂದೂ ಧರ್ಮದಲ್ಲಿ ಸಾರ ರೂಪದಲ್ಲಿದ್ದು, ವಿವೇಕಾನಂದರ ಚಿಂತನೆಗಳು ಇದನ್ನೇ ಪ್ರತಿಪಾದಿಸುತ್ತವೆ. 

No comments:

Post a Comment